×
Ad

ರತನ್ ಟಾಟಾ, ಅಶುತೋಷ ಪಾಂಡೆ ವಿರುದ್ಧದ ಸಮನ್ಸ್‌ಗೆ ಹೈಕೋರ್ಟ್ ತಡೆ

Update: 2017-08-01 21:14 IST

ಬೆಂಗಳೂರು, ಆ.1: ಲೇಖಕರ ಅನುಮತಿ ಪಡೆಯದೆ ತಮಗೆ ಸಂಬಂಧಿಸಿದ ವೆಬ್‌ಸೈಟ್‌ವೊಂದರಲ್ಲಿ ಮಾರ್ಚ್ ಆಫ್ ಎ ಫುಟ್ ಸೋಲ್ಜರ್ ಪುಸ್ತಕವನ್ನು ಮಾರಾಟಕ್ಕಿಟ್ಟ ಆರೋಪ ಸಂಬಂಧ ಟಾಟಾ ಗ್ರೂಪ್ ಕಂಪನೀಸ್ ಮಾಲಕ ರತನ್ ಎನ್. ಟಾಟಾ ಮತ್ತು ಉದ್ಯಮಿ ಅಶುತೋಷ ಪಾಂಡೆ ವಿರುದ್ಧ ನಗರದ 1ನೆ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ ನೀಡಿದೆ.

ತಮ್ಮ ವಿರುದ್ಧ ಹಲಸೂರು ಪೊಲೀಸರು ದಾಖಲಿಸಿದ ಎಫ್‌ಐಆರ್ ಮತ್ತು ಆ ಕುರಿತ 1ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ರತನ್ ಟಾಟಾ ಮತ್ತು ಅಶುತೋಷ್ ಪಾಂಡೆ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ, ಆ.18ರವರೆಗೆ ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆಗೆ ತಡೆ ನೀಡಿತು. ಅಲ್ಲದೆ, ಅರ್ಜಿ ಸಂಬಂಧ ಹಲಸೂರು ಠಾಣಾ ಇನ್ಸ್‌ಪೆಕ್ಟರ್ ಮತ್ತು ದೂರುದಾರ ಡಿ.ಕೆ. ಹಾವನೂರ್‌ಗೆ ನೋಟಿಸ್ ಜಾರಿ ಮಾಡಿದೆ.

www.landmarkonthenet.com ಮೆಸರ್ಸ್ ಲ್ಯಾಂಡ್ ಮಾರ್ಕ್ ರಿಟೈಲ್ ಲಿಮಿಟೆಡ್ ಎಂಬ ಸಂಸ್ಥೆಗೆ ಸೇರಿದ ಎಂಬ ವೈಬ್‌ಸೈಟ್‌ನಲ್ಲಿ ನಾನು ರಚಿಸಿರುವ ‘ಮಾರ್ಚ್ ಆಫ್ ಎ ಫುಟ್ ಸೋಲ್ಜರ್’ ಪುಸ್ತಕ ಮಾರಾಟಕ್ಕೆ ಇಡಲಾಗಿದೆ. ಆದರೆ ಮಾರಾಟಕ್ಕೆ ಇಡುವ ಸಂಬಂಧ ನನ್ನ ಹಾಗೂ ವೈಬ್‌ಸೈಟ್ ಆಡಳಿತ ಮಂಡಳಿ ಮಧ್ಯೆ ಯಾವ ಒಪ್ಪಂದ ಏರ್ಪಟ್ಟಿಲ್ಲ. ಈ ರತನ್ ಟಾಟಾ ಆ ಸಂಸ್ಥೆಯ ಮಾಲಕರಾಗಿದ್ದು, ಅಶುತೋಷ್ ಪಾಂಡೆ ಉದ್ಯೋಗಿಯಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಜರುಗಿಸುವಂತೆ ನಗರದ ಹಲಸೂರು ಠಾಣಾ ಪೊಲೀಸರಿಗೆ ಪುಸ್ತಕದ ಲೇಖಕ ಡಿ.ಕೆ.ಹಾವನೂರು ಅವರು 2013ರ ಸೆ.22ರಂದು ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

 ಈ ಮಧ್ಯೆ 2014ರ ಸೆ.13ರಂದು ದೂರನ್ನು ಲೇಖಕ ಹಿಂಪಡೆದುಕೊಂಡಿದ್ದರು. ಇದರಿಂದ ಪೊಲೀಸರು 2014ರಲ್ಲಿ ಬಿ ರಿಪೋರ್ಟ್ ಸಲ್ಲಿಸಿ, ಪ್ರಕರಣ ಮುಕ್ತಾಯಗೊಳಿಸಲು 1ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯವನ್ನು ಕೋರಿದ್ದರು. ಇದನ್ನು ಒಪ್ಪದ ಅಧೀನ ನ್ಯಾಯಾಲಯ, ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿತ್ತು. ರತನ್ ಟಾಟಾ ಮತ್ತು ಅಶುತೋಷ್ ಪಾಂಡೆ ವಿರುದ್ಧ ಹಕ್ಕು ಸ್ವಾಮ್ಯ ಕಾಯ್ದೆಯ ಸೆಕ್ಷನ್ 51 ಹಾಗೂ 66 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 200ರಡಿ ದೋಷಾರೋಪ ಹೊರಿಸಿ, 2017ರ ಜುಲೈ 12ರಂದು ಇಬ್ಬರಿಗೂ ಸಮನ್ಸ್ ಜಾರಿ ಮಾಡಿತ್ತು. ಜತೆಗೆ, ಆ.4ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನಿರ್ದೇಶಿಸಿತ್ತು. ಹೀಗಾಗಿ, ತಮ್ಮ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ರತನ್ ಟಾಟಾ ಮತ್ತು ಅಶುತೋಷ್ ಪಾಂಡೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ವೈಬ್‌ಸೈಟ್ ತಮ್ಮ ಒಡೆತನಕ್ಕೆ ಸೇರಿಲ್ಲ. ದೂರುದಾರ ತನ್ನ ದೂರು ಹಿಂಪಡೆದಿದ್ದಾರೆ. ಆದರೆ, ದೂರು ಹಿಂಪಡೆಯಲು ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಅಧೀನ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈ ಆರೋಪ ಸುಳ್ಳಿನಿಂದ ಕೂಡಿದ್ದು, ತಮ್ಮ ವಿರುದ್ಧ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥಪಡಿಸುವರೆಗೆ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News