2011ರ ಪ್ರಕರಣದಲ್ಲಿ 15 ಸೋಮಾಲಿ ಕಡಲ್ಗಳ್ಳರಿಗೆ ಏಳು ವರ್ಷಗಳ ಜೈಲುಶಿಕ್ಷೆ

Update: 2017-08-02 12:00 GMT

ಮುಂಬೈ,ಆ.2: 2011ರಲ್ಲಿಯ ಪ್ರಕರಣವೊಂದರಲ್ಲಿ 15 ಸೋಮಾಲಿ ಕಡಲ್ಗಳ್ಳರನ್ನು ಅಪರಾಧಿಗಳೆಂದು ಘೋಷಿಸಿರುವ ಮುಂಬೈನ ಸೆಷನ್ಸ್ ನ್ಯಾಯಾಲಯವೊಂದು ಅವರಿಗೆ ತಲಾ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ಈ ಕಡಲ್ಗಳ್ಳರು ಥೈಲಂಡ್‌ನ ವಾಣಿಜ್ಯ ಹಡಗೊಂದರಲ್ಲಿನ 22 ಜನರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡಿದ್ದರು. ಅವರ ವಿರುದ್ಧದ ಕೊಲೆ ಯತ್ನ ಮತ್ತು ಅಪಹರಣ ಆರೋಪಗಳನ್ನು ರುಜುವಾತು ಮಾಡುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ.

ಇದು ವಿವಿಧ ದೇಶಗಳ 91 ಜನರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡಿದ್ದ ಒಟ್ಟು 120 ಸೋಮಾಲಿ ಕಡಲ್ಗಳ್ಳರ ವಿರುದ್ಧ 2011ರಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣ ಗಳಲ್ಲಿ ಮೊದಲನೆಯದಾಗಿದೆ.

2011ರಲ್ಲಿ ತಟರಕ್ಷಣಾ ಪಡೆ ಮತ್ತು ನೌಕಾಪಡೆ ನಡೆಸಿದ್ದ ಜಂಟಿ ಕಾರ್ಯಾಚರಣೆ ಯಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಹೊತ್ತಿದ್ದ ಕಡಲ್ಗಳ್ಳರ ಮಾತೃನೌಕೆಯನ್ನು ಅಡ್ಡಗಟ್ಟಿ, ಅವರನ್ನು ಬಂಧಿಸಲಾಗಿತ್ತು. ಬಳಿಕ ಹಡಗಿನಲ್ಲಿ ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡಿದ್ದ 22 ಜನರನ್ನು ರಕ್ಷಿಸಲಾಗಿತ್ತು. ಇವರೆಲ್ಲ ಥಾಯ್ ಪ್ರಜೆಗಳಾಗಿದ್ದು, ಪ್ರಾಂತಾಲಯ ಹೆಸರಿನ ಹಡಗಿನಲ್ಲಿದ್ದರು. ಕಾರ್ಯಾಚರಣೆಯ ವೇಳೆ 15 ಸೋಮಾಲಿ ಕಡಲ್ಗಳ್ಳರು ಸಮುದ್ರಕ್ಕೆ ಹಾರಿ ಪರಾರಿಯಾಗಲು ಯತ್ನಿಸಿದ್ದ ರಾದರೂ ಅವರನ್ನು ಬಂಧಿಸುವಲ್ಲಿ ಜಂಟಿ ಪಡೆಗಳು ಯಶಸ್ವಿಯಾಗಿದ್ದವು.

ಕಡಲ್ಗಳ್ಳರು 2010ರಲ್ಲಿ ಪ್ರಾಂತಾಲಯ ಹಡಗನ್ನು ವಶಪಡಿಸಿಕೊಂಡಿದ್ದು, ಅದನ್ನು ತಮ್ಮ ಮಾತೃನೌಕೆಯನ್ನಾಗಿ ಬಳಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News