ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಬೇಡ
ಬೆಂಗಳೂರು, ಆ.2: ವೀರಶೈವ ಮತ್ತು ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಾಗಿದ್ದು, ಯಾವುದೇ ಕಾರಣಕ್ಕೂ ಬೇರೆ ಧರ್ಮವನ್ನಾಗಿ ವಿಂಗಡನೆ ಮಾಡಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮತ್ತು ಕ್ರಾಂತಿಯೋಗಿ ಬಸವಣ್ಣ ಜಂಟಿ ಪ್ರಚಾರ ಸಮಿತಿ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಹುಲಿಕಲ್ ಶಿವಗಂಗಯ್ಯ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ದುರುದ್ದೇಶದಿಂದ ವೀರಶೈವ ಲಿಂಗಾಯತರನ್ನು ಬೇರೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಮಠಾಧೀಶರು, ಕೆಲವು ಸಂಘಗಳ ನಾಯಕರು ಲಿಂಗಾಯತ ಒಗ್ಗಟ್ಟನ್ನು ಮುರಿಯುವ ದುರುದ್ಧೇಶದಿಂದ ಲಿಂಗಾಯತರು-ವೀರಶೈವರು ಬೇರೆ ಬೇರೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ವೀರಶೈವ-ಲಿಂಗಾಯತರು ಬಸವ ತತ್ವಗಳನ್ನು ಅನುಸರಿಸುವ ಮೂಲಕ ಜಾತಿ, ಮತ ಭೇದವಿಲ್ಲದೆ, ಸಾಮಾಜಿಕ ಕಳಕಳಿಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲವರು ಈ ಧರ್ಮವನ್ನು ಹೊಡೆಯುವ ಹುನ್ನಾರ ಮಾಡುತ್ತಿದ್ದಾರೆ. ಈ ಮೂಲಕ ಈ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ಧರ್ಮ, ಐಕ್ಯತೆ ನಾಶವಾಗಲಿದೆ ಎಂದು ಹೇಳಿದರು.