ಸ್ವತಂತ್ರ ವೀರಶೈವ ಲಿಂಗಾಯತ ಧರ್ಮಕ್ಕಾಗಿ ಹೋರಾಡಲು ಪಂಚಮಸಾಲಿ ಸಂಘದ ಮನವಿ
ಬೆಂಗಳೂರು, ಆ.2: ಸಮುದಾಯದ ಏಳಿಗೆಗಾಗಿ, ಸರ್ವತೋಮುಖ ಅಭಿವೃದ್ಧಿಗಾಗಿ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂಬ ಚರ್ಚೆ, ಘೋಷಣೆಗಳನ್ನು ನಿಲ್ಲಿಸಿ ಎಲ್ಲರೂ ಒಂದಾಗಿ ಸ್ವತಂತ್ರ ವೀರಶೈವ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುವಂತೆ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಮನವಿ ಮಾಡಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಬಸವರಾಜ ದಿಂಡೂರು, ವೀರಶೈವ-ಲಿಂಗಾಯತ ಒಂದೇ ಅರ್ಥದ ಶಬ್ದಗಳಾಗಿದ್ದು, ಎರಡೂ ಒಂದೇ ಆಗಿದೆ. ಹೀಗಾಗಿ ಮಠಾಧೀಶರು, ಧರ್ಮಗುರುಗಳು ಹಾಗೂ ರಾಜಕಾರಣಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಸಮುದಾಯಕ್ಕಾಗಿ ಒಟ್ಟಾಗಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವೆಂದು ಘೋಷಣೆಯಾಗಲು ಹೋರಾಡಬೇಕು ಎಂದು ತಿಳಿಸಿದರು.
ವ್ಯಕ್ತಿಯ ಪ್ರತಿಷ್ಠೆಗಿಂತ ಸಮಾಜದ ಕನಸು ಮುಖ್ಯವಾಗಬೇಕು. ಧರ್ಮವನ್ನು ಒಂದುಗೂಡಿಸುವ ಕೆಲಸವಾಗಬೇಕು. ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಹೆಸರನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.