ಪ್ರಯಾಣಿಕರ ಸುರಕ್ಷತೆ ಕಾಪಾಡುವುದು ಚಾಲಕರ ಕರ್ತವ್ಯ: ಪ್ರಮೋದ್ ಮಧ್ವರಾಜ್
ಬೆಂಗಳೂರು, ಆ.2: ಪ್ರಯಾಣಿಕರ ಸುರಕ್ಷತೆ ಹಾಗೂ ಸುಖಕರ ಪ್ರಯಾಣಕ್ಕೆ ಟ್ಯಾಕ್ಸಿ ಚಾಲಕರು ಆದ್ಯತೆ ನೀಡಬೇಕು ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಬೆಂಗಳೂರು ಟ್ಯಾಕ್ಸಿ ಅಸೋಸಿಯೇಷನ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ಬಿಟ್ಯಾಗ್ ಕರುನಾಡ ಟ್ಯಾಕ್ಸಿ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಶ್ರಮ ಜೀವಿಗಳಾಗಿದ್ದು, ದಿನದ 24 ಗಂಟೆಗಳ ಕಾಲ ದುಡಿಯುತ್ತಾರೆ. ಚಾಲಕರು ಪ್ರಾಮಾಣಿಕತೆಯಿಂದ ಬದುಕಿದಾಗ ಜನರು ನಿಮ್ಮನ್ನು ಗೌರವಿಸುತ್ತಾರೆ. ಸಾರ್ವಜನಿಕರು ಪ್ರಾಮಾಣಿಕತೆಯಿಂದ ದುಡಿಯುವ ನೌಕರರನ್ನು ಗೌರವದಿಂದ ಕಾಣಬೇಕು. ಕೆಲವರು ಮಾಡುವ ತಪ್ಪುಗಳಿಗೆ ಎಲ್ಲರನ್ನೂ ದೂಷಿಸುವುದು ಸರಿಯಲ್ಲ ಎಂದರು.
ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ವಾಹನ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಚಾಲಕರು ವಾಹನ ಚಾಲನೆ ಮಾಡುವಾಗ ಜಾಗೃತೆಯಿಂದ, ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕಾಗಿದೆ. ರಸ್ತೆ ಸುರಕ್ಷಾ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದಂತೆ ಕ್ರಮ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಬಿಟ್ಯಾಗ್ ಆಡಳಿತ ವಿಭಾಗದ ಮುಖ್ಯಸ್ಥ ಬಸವರಾಜು ನಾಗೇನಹಳ್ಳಿ, ಈ ಆ್ಯಪ್‌ನಲ್ಲಿ ಗ್ರಾಹಕರ ಸುರಕ್ಷಣೆ ಮತ್ತು ಸುಖಕರ ಪ್ರಯಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಸರಳ ಬುಕ್ಕಿಂಗ್, ಚಾಲಕರಿಂದ ನೇರ ಸೇವೆ, ಪಾರದರ್ಶಕ ಶುಲ್ಕ ಪಾವತಿ, ತುರ್ತು ಪರಿಸ್ಥಿತಿಯಲ್ಲಿ ಭದ್ರತಾ ಸೇವೆ ಮತ್ತು ಬೆಂಬಲ ಒದಗಿಸುವುದು ಈ ಆ್ಯಪ್‌ನ ವಿಶೇಷ. ಪ್ರಾಥಮಿಕ ಹಂತದಲ್ಲಿ ಬೆಂಗಳೂರು ಮತ್ತು ಮೈಸೂರಿಗೆ ಈ ಆ್ಯಪ್‌ನ ಸೇವೆಗಳು ಲಭ್ಯವಾಗಲಿವೆ ಎಂದು ಹೇಳಿದರು.
ಆ್ಯಪ್‌ನಲ್ಲಿ ಚಾಲಕರಿಗೆ ಆರು ತಿಂಗಳ ಕಮಿಷನ್ ರಹಿತ ಸೇವೆ ಒದಗಿಸಲಾಗಿದೆ. ಚಾಲಕರು, ಅವರ ಕುಟುಂಬದ ಸದಸ್ಯರಿಗೆ ಉಚಿತ ಆರೋಗ್ಯ ವಿಮೆ, ಅಪಘಾತ ವಿಮೆ ಸೌಲಭ್ಯ, ಸಹಾಯವಾಣಿ ಕಚೇರಿ, ಚಾಲಕರು ಮತ್ತು ಗ್ರಾಹಕರಿಗೆ ಖಾಸಗಿ ಪಹರಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಸಿ.ಚಂಗಲರಾಯರೆಡ್ಡಿ ಮೊಮ್ಮಗಳು ಕತಾ ವಾಸಂತಿ, ಸತೀಶ್, ಆದರ್ಶ, ಆಂತೋನಿ ಮತ್ತಿತರರು ಉಪಸ್ಥಿತರಿದ್ದರು.