ಆ.4ರಿಂದ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ
ಬೆಂಗಳೂರು, ಆ.2: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಹೂಗಳಿಂದ ರಾಷ್ಟ್ರಕವಿ ಕುವೆಂಪು ಅವರ ನಿವಾಸ ಕವಿಶೈಲ, ಜೋಗು ಜಲಪಾತದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಈ ಬಾರಿಯ ಸ್ವಾತಂತ್ರ ದಿನಾಚರಣೆ ಫಲಪುಷ್ಪ ಪ್ರದರ್ಶನದ ಪ್ರಮುಖ ಆರ್ಕಷಣೆಯಾಗಿ ಮೈದೆಳೆಯುತ್ತಿವೆ. ಈ ಪ್ರದರ್ಶನವೂ ಆ.4ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳಲಿದೆ.
ಲಾಲ್‌ಬಾಗ್‌ನಲ್ಲಿ ನಾಳೆಯಿಂದ ಆ.15ರವರೆಗೆ ನಡೆಯುವ ಸ್ವಾತಂತ್ರೋತ್ಸವ ಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ಕುವೆಂಪು ಮನೆ, ಕವಿಶೈಲದ ಪ್ರತಿರೂಪವನ್ನು ಹೂವುಗಳಿಂದ ನಿರ್ಮಿಸಲಾಗುತ್ತಿದೆ. ಜತೆಗೆ ಇದೇ ಮೊದಲ ಬಾರಿಗೆ ಜೋಗು ಜಲಪಾತ ನಿರ್ಮಾಣಗೊಳ್ಳುತ್ತಿದೆ.
ಬುಧವಾರ ನಗರದ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್ ಚಂದ್ರ ರೇ ಮಾತನಾಡಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರ ದೊರೆತು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿಯ 206ನೆ ಫಲಪುಷ್ಪ ಪ್ರದರ್ಶನವನ್ನು ರಾಷ್ಟ್ರಕವಿ ಕುವೆಂಪು ಅವರಿಗೆ ಅರ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಆ.4ರಂದು ಮಧ್ಯಾಹ್ನ 1 ಗಂಟೆಗೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನವನ್ನು ರಾಜ್ಯಪಾಲ ವಜುಬಾಯಿ ರುಡಾಬಾಯಿ ವಾಲಾ ಅವರು ಉದ್ಘಾಟಿಸುವರು. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗಾಜಿನ ಮನೆಯ ಮಧ್ಯಭಾಗದಲ್ಲಿ 3.50 ಲಕ್ಷ ಹೂವುಗಳಿಂದ ಕುವೆಂಪು ಮನೆ ನಿರ್ಮಿಸಲಾಗುತ್ತಿದೆ. ವಿವಿಧ ತಳಿಯ ವಿಭಿನ್ನ ಬಣ್ಣಗಳ ಹೂವುಗಳು ಮತ್ತು ಆಯ್ದ ಎಲೆ ಜಾತಿಯ ಜೋಡಣೆಯಿಂದ 21 ಅಡಿ ಎತ್ತರ, 30 ಅಡಿ ಅಗಲ ಹಾಗೂ 38 ಅಡಿ ಉದ್ದದ ಕವಿ ಕುವೆಂಪುರವರ ಮನೆಯ ಪ್ರತಿರೂಪ ನಿರ್ಮಾಣಗೊಂಡಿದೆ. ಇದರ ಜೊತೆಗೆ ಕುವೆಂಪುರವರ ಸಮಾಧಿಯಯನ್ನು ನಿರ್ಮಿಸಲಾಗಿದೆ.
1.70 ಕೋಟಿ ಖರ್ಚು: ಈ ಬಾರಿಯ ಲಾಲ್‌ಬಾಗ್ ಲಪುಷ್ಪ ಪ್ರದರ್ಶನಕ್ಕೆ ಒಟ್ಟಾರೆ 1.35 ಕೋಟಿ ಹಣ ಖರ್ಚು ಮಾಡುತ್ತಿದ್ದೇವೆ. ಇದರ ಜತೆಗೆ ಟಿಕೆಟ್ ಶುಲ್ಕದ ಟೆಂಡರ್‌ದಾರರಿಗೆ (12 ದಿನಕ್ಕೆ) ಸುಮಾರು 35 ಲಕ್ಷ ರೂ. ಹಣ ನೀಡುತ್ತಿದ್ದೇವೆ. ಹೀಗಾಗಿ ಒಟ್ಟಾರೆ 1.70 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ. ಈ ಬಾರಿ ಐದು ಲಕ್ಷ ಮಂದಿ ಪ್ರದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಪ್ರಭಾಷ್ ಚಂದ್ರ ರೇ ತಿಳಿಸಿದರು.
ಸಂಚಾರ ದಟ್ಟಣೆಗೆ ಬ್ರೇಕ್: ಮೊದಲ ಹಂತದ ಮೆಟ್ರೋ ರೈಲು ಯೋಜನೆ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವುದರಿಂದ ಲಾಲ್‌ಬಾಗ್ ವೆಸ್ಟ್‌ಗೇಟ್ (ಆರ್.ವಿ. ರಸ್ತೆ ಭಾಗ) ಬಳಿಗೆ ಮೆಟ್ರೊ ರೈಲು ಆಗಮಿಸಲಿದೆ. ಹೀಗಾಗಿ ಹೆಚ್ಚಿನ ನಾಗರಿಕರು ಈ ರೈಲನ್ನು ಅವಲಂಬಿಸುವದರಿಂದ ವಾಹನ ನಿಲುಗಡೆ ಮತ್ತು ಸಂಚಾರ ದಟ್ಟಣೆ ಈ ಬಾರಿ ಕಮ್ಮಿ.
ಶುಲ್ಕ ವಿವರ: ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 50 ರೂ., ರಜಾ ದಿನಗಳಲ್ಲಿ 60 ರೂ., ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 20 ರೂ. ನಿಗದಿಪಡಿಸಲಾಗಿದೆ. ಪ್ರದರ್ಶನದ ವೇಳೆ ಶನಿವಾರ, ಭಾನುವಾರಗಳಂದು ಮತ್ತು ಆ.15 ಅನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಪೊಲೀಸ್ ಸರ್ಪಗಾವಲು: ಪ್ರದರ್ಶನದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ 450ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 100 ಸಿಸಿ ಕ್ಯಾಮರಾಗಳ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಲಾಲ್‌ಬಾಗ್ ಆವರಣದಲ್ಲಿ ಜೇನುಗೂಡಗಳನ್ನು ತೆರವುಗೊಳಿಸಲು, ಕಾಟ, ನಾಯಿ, ಹಾವುಗಳಿಗೆ ಕಡಿವಾಣ ಹಾಕಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.