ಶುದ್ಧ ನೀರಿನ ಸಮಸ್ಯೆ ಪರಿಹಾರಕ್ಕೆ ಗೋಪಾಲನ್ ಕಾಲೇಜು ವಿದ್ಯಾರ್ಥಿಗಳಿಂದ ವಿನೂತನ ಪ್ರಾಜೆಕ್ಟ್
ಬೆಂಗಳೂರು, ಆ.2: ನಗರದಲ್ಲಿ ಶುದ್ಧ ನೀರಿನ ಸಮಸ್ಯೆ ತಲೆದೋರಿದೆ. ಇದಕ್ಕೆ ಪರಿಹಾರ ಎನ್ನುವ ರೀತಿಯಲ್ಲಿ ಗೋಪಾಲನ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಯಾವುದೇ ರಾಸಾಯನಿಕ ಬಳಸದೇ ತಂತ್ರಜ್ಞಾನ ಸಹಾಯದಿಂದ ನೀರು ಶುದ್ಧೀಕರಣ ಮಾದರಿ ಶೋಧಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬುಧವಾರ ಕಾಲೇಜಿನ ವಿದ್ಯಾರ್ಥಿಗಳು ಪ್ರಾಜೆಕ್ಟ್‌ನ ಪ್ರಾತ್ಯಕ್ಷತೆ ನೀಡಿದರು. ಇಂದು ಒಂದು ಲೀ. ಕಲುಷಿತ ನೀರನ್ನು ಶುದ್ಧ ಮಾಡಲು 8ರೂ. ವೆಚ್ಚವಾಗುತ್ತದೆ. ಆದರೆ, ನಾವು ತಯಾರಿಸಿದ ಮಾದರಿಯಲ್ಲಿ ಕೇವಲ 3ರೂ.ಗೆ ಶುದ್ಧ ಮಾಡಬಹುದಾಗಿದೆ ಎಂದು ಈ ವೇಳೆ ವಿವರಿಸಿದರು. ನಗರದ ಬಹುತೇಕ ಕೆರೆಗಳ ನೀರು ಕಲುಷಿತಗೊಂಡಿವೆ. ಅಷ್ಟೇ ಅಲ್ಲ, ಚರಂಡಿಗಳ ಮೂಲಕ ನೀರು ಸಮುದ್ರ ಸೇರುತ್ತಿವೆ. ಈ ನೀರನ್ನು ಪುನರ್ಬಳಕೆ ಮಾಡುವ ಮೂಲಕ ನೀರಿನ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳಬಹುದೆಂದು ಪ್ರಾಜೆಕ್ಟ್ ತಯಾರಿಕೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಕಾರ್ತಿಕ್ ತಿಳಿಸಿದರು.
ನೀರು ಶುದ್ಧೀಕರಣಕ್ಕೆ ಯಾವುದೇ ರಾಸಾಯನಿಕ ವಸ್ತುವನ್ನು ಬಳಸಲಾಗುವುದಿಲ್ಲ. ಬದಲಾಗಿ ತಂತ್ರಜ್ಞಾನವನ್ನು ಸಮಪರ್ಕವಾಗಿ ಉಪಯೋಗಿಸಿಕೊಳ್ಳಲಾಗಿದೆ. ಕಾರ್ಬನ್ ಮತ್ತು ಎ ಸ್ಯಾಂಡ್ ಫಿಲ್ಟರ್‌ಗಳನ್ನು ಬಳಕೆ ಮಾಡಲಾಗಿದೆ. ಮರಳು ಫಿಲ್ಟರ್ ಭಾರವಾದ ಕಣಗಳನ್ನು ತೆಗೆದರೆ, ಕಾರ್ಬನ್ ಶೋಧಕಗಳು ವಾಸನೆ ಮತ್ತು ನೀರಿನ ಬಣ್ಣವನ್ನು ಸರಿರೂಪಕ್ಕೆ ತರಲಿದೆ. ಬಳಿಕ ಯುವಿ ಫಿಲ್ಟರ್‌ನ ಮೂಲಕ ಸಂಪೂರ್ಣವಾಗಿ ಕ್ರಿಮಿನಾಶ ಮಾಡಲಾಗುವುದು. ಒಟ್ಟು 3ಲಕ್ಷ 20ಸಾವಿರ ರೂ.ನಲ್ಲಿ ತಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಒಂದು ದಿನದಲ್ಲಿ ಈ ರೀತಿಯ ನೀರು ಸಂಸ್ಕರಣಾ ಘಟಕದ ಮೂಲಕ ಪ್ರತಿನಿತ್ಯ 5ಲಕ್ಷ ಲೀ ನೀರು ಶುದ್ಧೀಕರಿಸಬಹುದಾಗಿದೆ. ಅಷ್ಟೇ ಅಲ್ಲ ಈ ನೀರನ್ನು ಕುಡಿಯಲು ಸಹ ಬಳಸಬಹುದಾಗಿದೆ. ಸರಕಾರ ಇಂತಹ ಪ್ರಾಜೆಕ್ಟ್‌ಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಪ್ರಾಜೆಕ್ಟ್ ಮಾರ್ಗದರ್ಶಕ ಕೆ.ಪ್ರಭಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲನ್ ೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ. ಪ್ರಭಾಕರ್, ಆಡಳಿತಗಾರ ಡಾ.ಆರ್. ಕರುಣಮೂರ್ತಿ, ಪ್ರಾಂಶುಪಾಲೆ ಡಾ.ಎ. ಪೌಲಿ ಥಾಮಸ್, ಪ್ರಾಜೆಕ್ಟ್ ಮಾರ್ಗದರ್ಶಕ ಕೆ. ಪ್ರಭಾಕರ್ ಮತ್ತಿತರಿದ್ದರು.