ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಸರ್ವ ಪ್ರಯತ್ನ
ಬೆಂಗಳೂರು, ಆ.2: ವೀರಶೈವ-ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ. ಯಾರೆಲ್ಲ ಅಷ್ಟಾವರಣ, ಷಟ್‌ಸ್ಥಳ, ಪಂಚಾಚಾರ ತತ್ತ್ವಗಳನ್ನು ಹಾಗೂ ಅಂಗೈಯಲ್ಲಿ ಲಿಂಗವಿಡಿದು ಲಿಂಗಪೂಜೆ ಮಾಡುವ ವೀರಶೈವ-ಲಿಂಗಾಯತರೆಲ್ಲರೂ ಒಂದೆ. ಹೀಗಾಗಿ, ವೀರಶೈವ-ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಸರ್ವ ರೀತಿಯ ಪ್ರಯತ್ನ ನಡೆಸಲು ಅಖಿಲ ಭಾರತ ವೀರಶೈವ ಮಹಾಸಭಾ ಮಹತ್ವದ ನಿರ್ಣಯ ಕೈಗೊಂಡಿತು.
ಬುಧವಾರ ನಗರದ ಹಾನಗಲ್ ಕುಮಾರಸ್ವಾಮಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿಣಿ ಹಾಗೂ ಜಿಲ್ಲಾ ಅಧ್ಯಕ್ಷರ ತುರ್ತು ಸಭೆಯಲ್ಲಿ ವೀರಶೈವ-ಲಿಂಗಾಯತ ಧರ್ಮದ ಮಾನ್ಯತೆ ಪಡೆಯಲು ಸರ್ವ ರೀತಿಯ ಪ್ರಯತ್ನ ನಡೆಸಲು ನಿರ್ಧರಿಸಲಾಯಿತೆಂದು ಸಭೆಯ ಬಳಿಕ ಪೌರಾಡಳಿತ ಸಚಿವ, ಮಹಾಸಭಾದ ಕಾರ್ಯದರ್ಶಿ ಈಶ್ವರ್ ಖಂಡ್ರೆಯವರು ಹೇಳಿದರು.
ವೀರಶೈವ-ಲಿಂಗಾಯತ ಧರ್ಮದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸದೆ ಸಮಾಜದ ಘನತೆ, ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಹಾಗೂ ತಮ್ಮ ಅಭಿಪ್ರಾಯವನ್ನು ಮಹಾಸಭಾದ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಕ್ಕೆ ಬರಲಾಯಿತು ಎಂದು ಹೇಳಿದರು. ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮಗಳು ಎಂದು ಹೇಳಿಕೆಗಳನ್ನು ನೀಡಲಾಗುತ್ತಿದೆ. ಹೀಗಾಗಿ, ಎರಡು ವಾದಗಳನ್ನು ಮಂಡಿಸುತ್ತಿರುವ ಗುರು-ವಿರಕ್ತ ಮಠಾಧಿಪತಿಗಳ, ಸಮಾಜದ ಜನಪ್ರತಿನಿಧಿಗಳ, ಮುಖಂಡರುಗಳ ಹಾಗೂ ವಿಷಯ ತಜ್ಞರ ಸಭೆಯನ್ನು ಸದ್ಯದಲ್ಲಿಯೇ ಕರೆದು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಮಹಾಸಭೆಯ ನಿಯಮ, ನಿರ್ಬಂದನೆಗಳನ್ನು ಒಪ್ಪಿ ಸದಸ್ಯರಾಗಿದ್ದ ಕೆಲವರು ಈಗ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ಮೂಡಿಸಲು ಹಾಗೂ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಸಭೆ ನಿರ್ಧರಿಸಿದೆ ಎಂದು ಹೇಳಿದರು.