ಹೈಕೋರ್ಟ್‌ಗೆ ಮತ್ತೊಂದು ಪಿಐಎಲ್ ಸಲ್ಲಿಕೆ
ಬೆಂಗಳೂರು, ಜು.2: ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ರಾಮಚಂದ್ರಾಪುರ ಮಠವು ಗಿರಿನಗರದಲ್ಲಿ ಪಾರ್ಕ್‌ಗೆ ಮೀಸಲಿಟ್ಟಿದ್ದ ನಿವೇಶನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂಬ ಆರೋಪ ಸಂಬಂಧ ಹೈಕೋರ್ಟ್‌ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಗಿರಿನಗರದಲ್ಲಿ ವಿಶ್ವಭಾರತಿ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಬಡಾವಣೆಯ ನಂ.2ಎನ ನಿವೇಶನವನ್ನು ಬಿಡಿಎ ನಾಗರಿಕ ಉಪಯೋಗಕ್ಕೆ ಅನುಮೋದಿಸಿತ್ತು. ನಂತರ ಪಾರ್ಕ್ ನಿರ್ಮಾಣಕ್ಕಾಗಿ ಆ ನಿವೇಶನವನ್ನು ಬಿಬಿಎಂಪಿಗೆ ಹಸ್ತಾಂತರಿಸಿತ್ತು. ಆದರೆ, ಬಿಡಿಎ ಮತ್ತು ಬಿಬಿಎಂಪಿಯು ರಾಘವೇಶ್ವರ ಭಾರತೀ ಸ್ವಾಮೀಜಿ, ರಾಘವೇಂದ್ರ ಭಾರತಿ ಮತ್ತು ಭಾಗವತ್ ಪಾದಸೇವಾ ಸಮಿತಿ ಟ್ರಸ್ಟ್ ಮತ್ತು ಶ್ರೀ ಸಂಸ್ಥಾನ ಗೋಕರ್ಣ ರಾಮಚಂದ್ರಾಪುರ ಮಠದೊಂದಿಗೆ ಶಾಮೀಲಾಗಿ ಈ ಜಾಗದಲ್ಲಿ ಮಠದ ಕಟ್ಟಡ ನಿರ್ಮಿಸಲಾಗಿದೆ. ಹೀಗಾಗಿ, ಈ ಬಿಬಿಎಂಪಿ ನೀಡಿರುವ ನಿವೇಶನದ ಖಾತೆ ಮತ್ತು ನಕ್ಷೆ ಮಂಜೂರಾತಿಯನ್ನು ರದ್ದುಪಡಿಸಬೇಕು ಎಂದು ಕೋರಿ ನ್ಯಾಯಾಂಗ ಹೊಣೆಗಾರಿಕೆಯ ಸಮಿತಿ ಹೊಸದಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಆದರೆ, ಇದೇ ಪ್ರಕರಣ ಸಂಬಂಧ 2016ರಲ್ಲಿ ಎಂ.ಪವನ್ ಪ್ರಸಾದ್ ಎಂಬುವರು ಪಿಐಎಲ್ ಸಲ್ಲಿಸಿದ್ದರು. ಮತ್ತೊಂದೆಡೆ ಇದೇ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ 2013ರಲ್ಲಿ ಮಠಕ್ಕೆ ನೀಡಿದ್ದ ನಕ್ಷೆ ಮಂಜೂರಾತಿಯನ್ನು ಬಿಎಂಪಿಯು 2016ರಲ್ಲಿ ಹಿಂಪಡೆದಿತ್ತು.
ಈ ಕ್ರಮ ಪ್ರಶ್ನಿಸಿ ರಾಮಚಂದ್ರಾಪುರ ಮಠ ತಕರಾರು ಅರ್ಜಿ ಸಲ್ಲಿಸಿದ್ದರಿಂದ ಬಿಬಿಎಂಪಿಯು ಇತ್ತೀಚೆಗೆ ನಕ್ಷೆ ಮಂಜೂರಾತಿ ಹಿಂಪಡೆದಿದ್ದ ತನ್ನ ಆದೇಶವನ್ನು ಹಿಂಪಡೆದಿತ್ತು. ಇದನ್ನು ಪರಿಗಣಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ಮಠದ ಅರ್ಜಿ ಇತ್ಯರ್ಥಪಡಿಸಿತ್ತು. ಇದೀಗ ನ್ಯಾಯಾಂಗ ಹೊಣೆಗಾರಿಕೆಯ ಸಮಿತಿ ಮತ್ತೆ ಇದೇ ಪ್ರಕರಣ ಸಂಬಂಧ ಹೊಸದಾಗಿ ಪಿಐಎಲ್ ಅರ್ಜಿ ಸಲ್ಲಿಸಿತ್ತು.
ಒಂದೇ ಪೀಠದಿಂದ ವಿಚಾರಣೆಗೆ ಮನವಿ: ಈ ನಡುವೆ ಎಂ.ಪವನ್ ಪ್ರಸಾದ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ನ್ಯಾಯಾಂಗ ಹೊಣೆಗಾರಿಕೆಯ ಸಮಿತಿ ಪರ ಹಾಜರಿದ್ದ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ ಅವರು, ಪಾರ್ಕ್ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ರಾಮಚಂದ್ರಾಪುರ ಮಠವು ಕಟ್ಟಡ ನಿರ್ಮಾಣ ಮಾಡಿರುವ ಪ್ರಕರಣ ಸಂಬಂಧ ಮತ್ತೊಂದು ಪಿಐಎಲ್ ಸಲ್ಲಿಸಲಾಗಿದೆ. ಈ ಅರ್ಜಿಯು ಶೀಘ್ರ ವಿಚಾರಣೆಗೆ ಬರಲಿದ್ದು, ಬೇರೊಂದು ಪೀಠದ ಮುಂದೆ ರೋಸ್ಟರ್ ಪ್ರಕಾರ ವಿಚಾರಣೆಗೆ ಬರಬಹುದು. ಆದರೆ, ಒಂದೇ ಪ್ರಕರಣದ ಕುರಿತ ಎರಡು ಅರ್ಜಿಗಳನ್ನು ಪ್ರತ್ಯೇಕ ಪೀಠಗಳು ವಿಚಾರಣೆ ನಡೆಸುವುದು ಬೇಡ. ಎರಡೂ ಅರ್ಜಿಗಳನ್ನು ಒಂದೇ ಪೀಠ ವಿಚಾರಣೆ ನಡೆಸುವುದು ಸೂಕ್ತ ಎಂದು ಕೋರ್ಟ್ ಗಮನಕ್ಕೆ ತಂದರು.
ರಾಮಚಂದ್ರಾಪುರ ಮಠದ ಪರ ಹಾಜರಿದ್ದ ಹಿರಿಯ ವಕೀಲ ರಾಘವನ್ ಅವರು, ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗ ಮಾಡುವುದಕ್ಕೆ ಇದೊಂದು ಮಾದರಿ ಪ್ರಕರಣ. ದುರುದ್ದೇಶಪೂರ್ವಕವಾಗಿ ಮಠದ ವಿರುದ್ಧ ಅರ್ಜಿ ಸಲ್ಲಿಸಲಾಗುತ್ತಿದ್ದು, ಮಠ ಹಾಗೂ ಸ್ವಾಮೀಜಿಗೆ ಕಿರುಕುಳ ನೀಡುವು ಪ್ರಕ್ರಿಯೆಗೆ ಅಂತ್ಯವಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಒಂದೇ ಪ್ರಕರಣ ಸಂಬಂಧ ಎರಡು ಅರ್ಜಿಗಳು ಸಲ್ಲಿಕೆಯಾಗಿದೆ. ಹೀಗಾಗಿ, ಎರಡೂ ಅರ್ಜಿಗಳ ಸಂಬಂಧ ಪ್ರತ್ಯೇಕ ಪೀಠಗಳು ವಿಚಾರಣೆ ನಡೆಸುವುದು ಸೂಕ್ತವಲ್ಲ. ಎರಡೂ ಅರ್ಜಿಗಳನ್ನು ಒಂದೇ ಪೀಠ ವಿಚಾರಣೆ ನಡೆಸುವ ಸಂಬಂಧ ಮುಖ್ಯ ನ್ಯಾಯಮೂರ್ತಿಗಳು ಸೂಕ್ತ ಆದೇಶ ಹೊರಡಿಸಬೇಕು ಎಂದು ಕೋರಿದರು. ಜತೆಗೆ, ಅದಕ್ಕಾಗಿ ಕಡತವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಡುವಂತೆ ಕೋರ್ಟ್‌ಗೆ ಕಚೇರಿಗೆ ಸೂಚಿಸಿತು.