ಮಲೆನಾಡಿನೊಳಗಿಂದ...

Update: 2017-08-02 18:35 GMT

‘‘ಬಳ್ಳಾರಿಗೆ ಇರೋದು ಎರಡೇ ಕಾಲ, ಒಂದು ಬೇಸಿಗೆ ಮತ್ತೊಂದು ಕಡುಬೇಸಿಗೆ, ಅಷ್ಟೆ’’ ಅಂದಿದ್ದರು ಬೀಚಿ. ಬರದ ಮಾರಿ ಇಡೀ ರಾಜ್ಯವನ್ನೇ ಬೆನ್ನಟ್ಟುತ್ತಿರುವಾಗ ಬೀಚಿಯವರ ಬಿಸಿಮಾತಿನ ಮರ್ಮ ಮತ್ತೆ ಮತ್ತೆ ನೆನಪಾಗುತ್ತದೆ, ವಿಚಿತ್ರವೆಂದರೆ ನೀರು-ಹಸಿರು, ಕಾಡು-ಗುಡ್ಡ, ಮಳೆ-ಬೆಳೆ ಅಂತೆಲ್ಲಾ ನಮೂನೆಯ ಪ್ರಾಕೃತಿಕ ವೈಭವಗಳಲ್ಲಿ ಸದಾ ಮಿಂದೇಳುವ ಅಪ್ಪಟ ಮಲೆನಾಡ ಸೀಮೆ ತೀರ್ಥಹಳ್ಳಿಗೂ ಈಗೀಗ ಅಂಥದ್ದೇ ವಿಲಕ್ಷಣ ಅನುಭವ..

ಮಲೆನಾಡಿನ ಚಿತ್ರ ಈಗ ಬದಲಾಗುತ್ತಿದೆ. ನಿರಂತರ ಅನಾವೃಷ್ಟಿ, ಭೀಕರ ಬರದ ರಣ ಬಿಸಿಲಿನ ಜೊತೆಗೆ ಈ ಬಾರಿ ಮುಂಗಾರಿನಲ್ಲೇ ಬಹುತೇಕ ತೋಟ-ಗದ್ದೆ, ಗಿಡ-ಗೆಡ್ಡೆಗಳೆಲ್ಲ ಒಣಗಿ ನಿಂತಿವೆ.ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳೆಲ್ಲ ಹಾಳು ಬಿದ್ದು ವಿಳಾಸ ಮರೆತಿವೆ.ಜನ-ದನಗಳ ಕುಡಿಯುವ ನೀರಿಗೂ ತತ್ವಾರ ಬಂದಿದೆ. ಮಳೆಗಾಲದಲ್ಲಿ ಬಿಸಿಲಿಗೆ ಕೊಡೆ ಹಿಡಿಯುವ ಪಾಡು ಮಲೆನಾಡಿಗರಿಗೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ.

ಹಿಂದೆಲ್ಲಾ, ಅಲ್ಲಲ್ಲಿ ಎಪ್ರಿಲ್ ತಿಂಗಳಲ್ಲಿ ಕಾಣುತ್ತಿದ್ದ ಬೋರ್‌ವೆಲ್ ಲಾರಿಗಳ ರಾಕ್ಷಸೀ ಮೊರೆತ ಈ ಬಾರಿ ಆಗಸ್ಟ್ ಬರುವುದರೊಳಗೆ ಅಷ್ಟದಿಕ್ಕುಗಳಲ್ಲೂ ಶುರುವಾಗಿದೆ. ಭೂಗರ್ಭವನ್ನು ಸೀಳಿ ಪಾತಾಳಗಂಗೆಯನ್ನು ಜಾಲಾಡುವುದು ಈಗಂತೂ ಎಲ್ಲರ ಮಾಮೂಲಿ ಖಯಾಲಿ. ಒಟ್ಟಾರೆ ನೀರಿಗಾಗಿ ರೈತರದ್ದು ಭಗೀರಥನ ಮೀರುವ ಪ್ರಯತ್ನ. ಆದರೆ ಎಲ್ಲವನ್ನ್ನೂ ಮೀರಿ ಮಲೆನಾಡಿನ ಉಳ್ಳವರು-ಇಲ್ಲದವರನ್ನು ಒಟ್ಟೊಟ್ಟಿಗೆ ಬಾಧಿಸಿದ ಭೀಕರ ಬರ ಬಲಿಪಡೆದಿದ್ದು ಬಹುನಿರೀಕ್ಷೆಯಿಂದ ಸಾಕಿದ್ದ ತೋಟ, ಬೆವರು ಬಸಿದು ಕೂಡಿಟ್ಟ ಪುಡಿಗಾಸು ಮತ್ತು ಉಳಿದಿದ್ದ ಚೂರೇ ಚೂರು ನೆಮ್ಮದಿಯನ್ನು. ಮಲೆನಾಡನ್ನು ಇಂಥದ್ದೊಂದು ದಾರುಣ ಸ್ಥಿತಿಗೆ ನೂಕಿದ, ಕಂಡುಂಡ ಕೆಲ ಸಂಗತಿಗಳನ್ನು ಇಲ್ಲಿ ಹೇಳಲೇ ಬೇಕಿದೆ.

ಎಪ್ಪತ್ತರ ದಶಕದವರೆಗೂ ಸಾಮಾಜಿಕವಾಗಿ ಇಬ್ಭಾಗವಾಗಿದ್ದ ಹಳ್ಳಿಗಳಲ್ಲಿದ್ದದ್ದು ಜಮೀನ್ದಾರ ಹಾಗೂ ಕೂಲಿಕಾರ ವರ್ಗ ಮಾತ್ರ. ಸುಧಾರಣ ಪರ್ವದ ಭಾಗವಾಗಿ, ಗುಡಿಸಲ ಕಂದೀಲಿನಲ್ಲೆ ಜನ ತಮ್ಮನ್ನು ಅರಿವಿನ ಬೆಳಕಿಗೆ ಒಡ್ಡಿಕೊಳ್ಳುತ್ತಾ ಆರ್ಥಿಕ ಸ್ವಾವಲಂಬನೆಯೊಂದಿಗೆ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗಿಬಿಟ್ಟರು. ಕಣ್ಣು ಕುಕ್ಕುವ ಬಂಗಾರದ ಬೆಳೆ ಅಡಿಕೆಯ ಬೆನ್ನು ಬಿದ್ದರು. ಬಡತನ ಮತ್ತು ಸಾಲವನ್ನು ಮಾತ್ರ ದಯಪಾಲಿಸಿದ್ದ ತುಂಡರಸರಿಗೆ, ಜೀತಕ್ಕಿರಿಸಿದ ಒಡೆಯರಿಗೆ ಸಡ್ಡು ಹೊಡೆದರು. ಹಿಡಿಯಷ್ಟಿದ್ದ ಭತ್ತದ ಗದ್ದೆ ತೋಟವಾಗಿ ಬದಲಾಯ್ತು. ನೋಡ ನೋಡುತ್ತ ಕಾಡುಗುಡ್ಡಗಳೆಲ್ಲ ಸೊಂಟಮುರಿದುಕೊಂಡು ಮಕಾಡೆ ಮಲಗಿದವು. ವರ್ಷದುದ್ದಕ್ಕೂ ಒತ್ತುವರಿ ಒಡ್ಡುಗಳು ತೋಟದ ಒತ್ತಿನ ಕಾಡನ್ನು ಅತಿಕ್ರಮಿಸುತ್ತ ಹೋದವು. ಹಸಿರು ಕರಗಿಸುವುದೇ ಅವರ ನಿತ್ಯದ ಹರುಷವಾಯ್ತು. ಕಡುಬಡತನದಿಂದ ಬದುಕು ಹೊರಬರುತ್ತಿತ್ತಾದರೂ ಕಾಡು ಬರಿದಾಗುತ್ತಲೇ ಹೋಯಿತು.ಕಾಲಚಕ್ರದ ಸುಳಿಗೆ ಸಿಲುಕಿದ ಮೇಲೆ ಉಳಿವಿಗಾಗಿನ ಹೋರಾಟದಲ್ಲಿ, ಇವತ್ತಿಗೂ, ಹಸಿರೇ ಕಾಣದಹಾಗೆ ಉಳಿದ ಕಾಡನ್ನೆಲ್ಲ ಖಾಲಿ ಮಾಡಿಬಿಡುವ ರಣೋತ್ಸಾಹ ಬಡಹಳ್ಳಿಗರದ್ದಾಗಿ ಬಿಟ್ಟಿತು!

ಮಲೆನಾಡನ್ನು ಹುರಿದು ಮುಕ್ಕಿದ ಇನ್ನೂ ಒಂದು ಅನಿಷ್ಟದ ಬಗ್ಗೆ ಹೇಳುವುದಿದೆ. ಅದು ಊರಿಂದೂರಿಗೆ ದಾಟಿಸುವ ಮಾರಿಯ ಹಾಗೆ, ಮೂರು ದಶಕದ ಹಿಂದೆ ನೆರೆಯ ಕೇರಳದಿಂದ ಎಡಗಾಲಿಟ್ಟ ಶುಂಠಿ ಎಂಬ ದುಡ್ಡಿನ ಬೆಳೆ. ಮೈಕೊಡವಿ ಎರಡೂ ಕೈಗಳಿಂದ ಬೆಳೆ ಬಾಚಲಾರಂಬಿಸಿದ ಜನರ ಮತ್ತು ಜೆಸಿಬಿ-ಬುಲ್ಡೋಜರ್‌ಗಳ ರಣಹಸಿವಿಗೆ ಕಣ್ಣೆದುರಿದ್ದ ಕಿಲೊಮೀಟರ್‌ಗಟ್ಟಲೆ ಹಕ್ಕಲು-ಗುಡ್ಡ-ಕಾನು-ಕಣಿವೆಗಳೆಲ್ಲ ಬೆಳಗಾಗುವುದರಲ್ಲಿ ಮಂಗಮಾಯ. ಧನದಾಹಕ್ಕೆ ಬಿದ್ದ ಜನ ಇಳುವರಿಯಾಸೆಗೆ ಸುರಿದ ಲೋಡುಗಟ್ಟಲೆ ರಾಸಾಯನಿಕಗಳು ಗಾಳಿ-ಮಣ್ಣನ್ನು ವಿಷಮಯಗೊಳಿಸಿದ ಪರಿಣಾಮ ಜೈವಿಕ ಚಟುವಟಿಕೆಗೆ ಅಗತ್ಯವಾದ ಜೀವಜಂತುಗಳು ಇನ್ನೆಂದೂ ನೆಲೆಗೊಳ್ಳಲಾಗದ ನಿರ್ಜೀವ ಸ್ಥಿತಿಗೆ ಭೂಮಿ ತಲುಪಿಬಿಟ್ಟಿತು. ಜೊತೆಗೆ ಮಲೆನಾಡನ್ನು ಬೆತ್ತಲೆಗೊಳಿಸುತ್ತಲೇ ಬಂದ ತಣ್ಣನೆಯ ಕ್ರೌರ್ಯವೊಂದು ಕಣ್ಣ ಮುಂದಿದೆ.

ಸ್ವಾತಂತ್ರ ಪೂರ್ವ 1939 ರಲ್ಲಿ ‘ಅಭಿವೃದ್ಧಿಯ ಕೊಡುಗೆ’ ಎಂಬ ಹೆಮ್ಮೆಯಲ್ಲಿ ಅವತರಿಸಿದ ಭದ್ರಾವತಿಯ ಕಾಗದ ಕಾರ್ಖಾನೆ. ಉತ್ಪಾದನೆಗೆ ಈ ಭಾಗದ ಫಲವತ್ತಾದ, ಜೀವ ವೈವಿಧ್ಯದ ತೊಟ್ಟಿಲಂತಿದ್ದ ಅಮೂಲ್ಯ ನೆಲವನ್ನು ಮೂರುಕಾಸಿಗೆ ಸರಕಾರದಿಂದ ಹರಾಜು ಪಡೆಯಿತು ಕಾರ್ಖಾನೆ. ಕಾಲಾಂತರದಿಂದ ಮೂಡಿಬಂದಿದ್ದ ವೈವಿಧ್ಯ ಸಸ್ಯರಾಶಿಯನ್ನು ಧ್ವಂಸಗೊಳಿಸಿ ಬೆಳೆದ ಅಕೇಶಿಯ, ಮ್ಯಾಂಜಿಯಂ, ನೀಲಗಿರಿಯಂತಹ ಅವೈಜ್ಞಾನಿಕ ಬೆಳೆ, ಸಮೃದ್ಧಮಣ್ಣಿನ ಗುಣಕೆಡಿಸಿದ್ದಲ್ಲದೆ ಅಂತರ್ಜಲ ಕುಸಿತ ಹಾಗೂ ಜೀವ ವೈವಿಧ್ಯನಾಶದಿಂದ ತೀವ್ರವಾದ ಪ್ರಾಕೃತಿಕ ಅಸಮತೋಲನಕ್ಕೆ ನಾಂದಿ ಹಾಡಿತು.

ಸೋಜಿಗದ ಸಂಗತಿ ಅಂದರೆ ಪರಿಸರದ ಮೇಲಿನ ಈ ದೌರ್ಜನ್ಯದ ವಿರುದ್ಧ ಬುದ್ಧಿವಂತ ನಾಡ ಜನ ಈವರೆಗೂ ದೊಡ್ಡ ಮಟ್ಟದಲ್ಲಿ ಸಂಘಟಿತರಾಗಲೇ ಇಲ್ಲ!
ನೆಲ ಇಷ್ಟೆಲ್ಲ ನರಳಿದ ಮೇಲೆ ಇನ್ನೇನು ಆಗಲು ಸಾಧ್ಯ?. ಜೀವನದಿ ತುಂಗೆಯ ಹರಿವು ಚರಂಡಿಯಷ್ಟಾಗಿದೆ. ಮಳೆ ಮಾಯವಾಗಿ ಬಹಳ ದಿನಗಳೇ ಕಳೆದಿವೆ. ಅಂತರ್ಜಲ ಪಾತಾಳ ಸೇರಿದಂತಿದೆ. ನೆಲದ ಸ್ಥಾನಿಕ ಪ್ರಾಣಿ-ಪಕ್ಷಿಗಳು ಗುಳೇ ಹೋಗಿವೆ. ಕೆಲವು ನೆಲಸೇರಿವೆ. ಹೊಳೆದಂಡೆಯಲ್ಲಿ ಹೇಳಿಮುಗಿಸಲಾರದ ಕಲ್ಲು-ಮರಳುಗಣಿಗಾರಿಕೆ, ಕಳ್ಳನಾಟಸಾಗಣೆಯ ಮಾಯಾಜಾಲವಿದೆ. ರಸ್ತೆ ಅಗಲೀಕರಣಕ್ಕೆ ನೂರಾರು ಮರಗಳು ಈಗಾಗಲೇ ಪ್ರಾಣ ತೆತ್ತಿವೆ. ಅರಣ್ಯರಕ್ಷಣೆಗೆ ದೇಶವಿದೇಶಗಳಿಂದ ಹರಿದು ಬರುತ್ತಿರುವ ಸಾವಿರಾರು ಕೋಟಿ ಹಣ ಫಲಭರಿತ ಮಣ್ಣಿನೊಂದಿಗೆ ತುಂಗೆಯಲ್ಲಿ ಕೊಚ್ಚಿಕೊಂಡು ಹೋಗುತ್ತಲೇ ಇದೆ.

ಇಷ್ಟರ ನಡುವೆ ತೀರ್ಥಹಳ್ಳಿಗೆ ಎಪ್ರಿಲ್ ಮಳೆಯಂತಹ ಸಣ್ಣ ಸಾಂತ್ವನ ಕಂಡಿದೆ. ಎಲ್ಲಿಂದಲೋ ಬಂದ ಉತ್ಸಾಹಿ ಮನಸುಗಳು ಅರಣ್ಯನಾಶದ ತೀವ್ರತೆಗೆ ಚಿಕಿತ್ಸೆ ನೀಡಲು ಕೆಲ ಸ್ಥಳೀಯರೊಂದಿಗೆ ಬೀಜದುಂಡೆ (ಖಛಿಛಿ ಚಿಚ್ಝ್ಝ) ಬಿತ್ತುವ ಮೂಲಕ ಗಿಡ ನೆಡುವ ಕೈಂಕರ್ಯ ತೊಟ್ಟಿದ್ದಾರೆ. ಏನಾದರೂ ಮಾಡಿ ಒಂದಷ್ಟು ಹಸಿರನ್ನು ಪುನರ್‌ಸ್ಥಾಪಿಸಬೇಕೆಂಬ ಅವರ ಅದಮ್ಯ ಉತ್ಸಾಹವು ಜನಾಂದೋಲನವಾಗಬೇಕಾದ ಜರೂರು ಈ ಹೊತ್ತಿನದು..ಪೇಟೆಯಲ್ಲಿನ ಈ ಜಾಗೃತಿಯ ಆಚೆ ಹಸಿರಿನ ನೈಜರಕ್ಷಕರಾದ ಹಳ್ಳಿಗರದ್ದು ‘ಅಡಿಕೆ-ಶುಂಠಿ’ ಜಾಗವಿಸ್ತರಣೆಯ ಅದೇ ಕನವರಿಕೆ... ಮರುಗಳಿಗೆಯಲ್ಲಿ ಕಷ್ಟಪಟ್ಟು ಕಾಪಿಟ್ಟ ತೋಟವೆಲ್ಲ ಉರಿಯಲ್ಲಿ ಕಣ್ಣೆದುರಿಗೆ ಕಮರುವಾಗ ಅಂಚಿಗೆ ಬಂದು ನಿಂತು ಮುಗಿಲಿಗೆ ಮುಖಮಾಡಿ ಮುಗ್ಧತೆಯಿಂದಲೇ ರೋದಿಸುತ್ತಾರೆ!
‘‘ಯಾತಕ್ಕೆ ಮಳೆ ಹೋದವೋ..ಶಿವ ಶಿವ..’’

Writer - ಸತೀಶ್ ಜಿ.ಕೆ. ತೀರ್ಥಹಳ್ಳಿ

contributor

Editor - ಸತೀಶ್ ಜಿ.ಕೆ. ತೀರ್ಥಹಳ್ಳಿ

contributor

Similar News