×
Ad

ಡಿಸೆಂಬರ್ ಅಂತ್ಯಕ್ಕೆ ಸಾರಿಗೆ ಸಂಸ್ಥೆಗಳಿಗೆ 5 ಸಾವಿರ ಹೊಸ ಬಸ್: ರಾಮಲಿಂಗಾರೆಡ್ಡಿ

Update: 2017-08-03 19:16 IST

ಬೆಂಗಳೂರು, ಆ. 3: ಸಾರ್ವಜನಿಕ ಪ್ರಯಾಣಿಕರು ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೆ ಡಿಸೆಂಬರ್ ಅಂತ್ಯಕ್ಕೆ ಒಟ್ಟು 5 ಸಾವಿರ ಹೊಸ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ-1092, ಬಿಎಂಟಿಸಿಗೆ 832, ವಾಯವ್ಯ ಸಾರಿಗೆ ಸಂಸ್ಥೆಗೆ-1250, ಈಶಾನ್ಯ ಸಾರಿಗೆ ಸಂಸ್ಥೆಗೆ 448 ಹೊಸ ಬಸ್ ಖರೀದಿಸಲಾಗುವುದು. ಅಲ್ಲದೆ, ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ ಬಿಎಂಟಿಸಿಗೆ 1500 ಹೊಸ ಬಸ್‌ಗಳನ್ನು ನೀಡುತ್ತಿದೆ ಎಂದು ಹೇಳಿದರು.

ಅನುದಾನ ಕಡಿತಕ್ಕೆ ಆಕ್ಷೇಪ: ‘ನರ್ಮ್’ ಯೋಜನೆಯಡಿ ಈ ಹಿಂಸೆ ಸಾರಿಗೆ ಸೌಲಭ್ಯ ಕಲ್ಪಿಸಲು ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡುತ್ತಿತ್ತು. ಆದರೆ, ಇದೀಗ ಕೇಂದ್ರ ಸರಕಾರದ ‘ಅಮೃತ್’ ಯೋಜನೆಯಡಿ ಸಾರಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ನೀಡುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು.

ಈ ಹಿಂದೆ ‘ನರ್ಮ್’ ಯೋಜನೆಯಡಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಶೇ.80 ಮತ್ತು ಬಿಎಂಟಿಸಿಗೆ ಬಸ್ ಖರೀದಿಸಲು ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಇದೀಗ ಅಮೃತ್ ಯೋಜನೆಯಡಿ ರಸ್ತೆ, ಚರಂಡಿ ಇನ್ನಿತರ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಿದ್ದು, ಸಾರಿಗೆ ಸೌಕರ್ಯಕ್ಕೆ ಅನುದಾನ ನೀಡಿಲ್ಲ ಎಂದು ದೂರಿದರು.

ಆದಾಯಕ್ಕೆ ಖೋತಾ: ಮೆಟ್ರೊ ರೈಲು ಸಂಚಾರ ಆರಂಭಗೊಂಡ ಮೇಲೆ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 2.15ಲಕ್ಷದಷ್ಟು ಇಳಿಕೆಯಾಗಿದ್ದು, ಪ್ರತಿನಿತ್ಯ ಸುಮಾರು 5ಲಕ್ಷ ರೂ.ನಷ್ಟು ಆದಾಯವೂ ಖೋತಾ ಆಗಿದೆ ಎಂದು ಅವರು ಮಾಹಿತಿ ನೀಡಿದರು. ನಗರದ ಸುತ್ತಮುತ್ತಲ 25ಕಿ.ಮೀ ವರೆಗೂ ಬಿಎಂಟಿಸಿ ಸಂಪರ್ಕ ವ್ಯವಸ್ಥೆ ಕಲ್ಪಿಸಿದ್ದು, ಮಡಿಕೇರಿ, ಪುತ್ತೂರು ಹೊರತುಪಡಿಸಿದರೆ ರಾಜ್ಯದ ಎಲ್ಲ ನಗರಗಳಿಗೂ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದ ಅವರು, ಕಳೆದ 4 ವರ್ಷಗಳಲ್ಲಿ 24 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

ವರ್ಗಾವಣೆ: ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಅಂತರ ನಿಗಮ ವರ್ಗಾವಣೆಗೆ ಸಾರಿಗೆ ನೌಕರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 700 ಮಂದಿ ನೌಕರರು ಸಮರ್ಪಕ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದು, ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದರೆ, ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರಕಾರ ಐಟಿ ದುರ್ಬಳಕೆ ಮಾಡಿಕೊಂಡು ದಾಳಿ ನಡೆಸಿದ್ದು ಸಲ್ಲ. ಐಟಿ, ಇಡಿ, ಸಿಬಿಐ ದುರ್ಬಳಕೆ ಮೂಲಕ ಕೇಂದ್ರದ ದ್ವೇಷದ ರಾಜಕೀಯ ಒಳ್ಳೆಯ ಬೆಳವಣಿಗೆಯಲ್ಲ’
-ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News