×
Ad

ತುರ್ತು ಸೇವಾ ವಾಹನಗಳ ಬಗ್ಗೆ ಗೌರವ ಭಾವನೆ ಅಗತ್ಯ: ಬಿ.ದಯಾನಂದ್

Update: 2017-08-03 19:18 IST

ಬೆಂಗಳೂರು, ಆ.3: ಆಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು ಸೇರಿದಂತೆ ತುರ್ತು ಸೇವಾ ವಾಹನಗಳಿಗೆ ದಾರಿ ಬಿಡುವ ಸರಿಯಾದ ಕ್ರಮದ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಾರಿಗೆ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಗುರುವಾರ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸೆನೆಸ್ ಸ್ಟಡೀಸ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿಯಾನದ ಮೊದಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆಯಲ್ಲಿ ತುರ್ತು ಸೇವಾ ವಾಹನ ಕಂಡರೆ ವಾಹನ ಚಾಲಕರು ಹಾಗೂ ಸಾರ್ವಜನಿಕರು ಗೌರವದಿಂದ ದಾರಿ ಬಿಟ್ಟುಕೊಡಬೇಕು ಎಂದು ತಿಳಿಸಿದರು. ದಿನೇ ದಿನೇ ಹೆಚ್ಚುತ್ತಿರುವ ನಗರ ಸಂಚಾರ ದಟ್ಟಣೆ ತುರ್ತು ಸೇವಾ ವಾಹನಗಳು ಸರಿಯಾದ ಸಮಯದಲ್ಲಿ ಆಸ್ಪತ್ರೆ, ಅಪಘಾತಕ್ಕೀಡಾಗಿರುವ ಹಾಗೂ ಬೆಂಕಿಗಾಹುತಿಯಾದ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಸಂಚಾರ ವ್ಯವಸ್ಥೆಯ ತೊಡಕಿನಿಂದಾಗಿ ಸಾವುನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ವಿಷಾದಿಸಿದರು.

ಸಾರ್ವಜನಿಕ ವಾಹನ ಸವಾರರಿಗೆ ತುರ್ತು ಸೇವಾ ವಾಹನಗಳಿಗೆ ದಾರಿ ಬಿಡುವ ಮನಸ್ಸಿರುತ್ತದೆ. ಆದರೆ, ಯಾವ ರೀತಿಯಲ್ಲಿ ತುರ್ತು ವಾಹನಗಳಿಗೆ ದಾರಿ ಬಿಟ್ಟಿಕೊಡಬೇಕು ಎಂಬ ಅರಿವಿಲ್ಲದೆ ಫಜೀತಿಗೆ ಸಿಲುಕುವಂತಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತುರ್ತು ವಾಹನಗಳಿಗೆ ದಾರಿ ಬಿಡುವ ಕ್ರಮದ ಬಗ್ಗೆ ಅರಿವು ಮೂಡಿಸುವುದು ನಮ್ಮ ಅಭಿಯಾನದ ಗುರಿಯಾಗಿದೆ ಎಂದು ಅವರು ಹೇಳಿದರು. ತುರ್ತು ಸೇವಾ ವಾಹನಗಳ ಕುರಿತ ಜಾಗೃತಿ ಅಭಿಯಾನದ ಮೊದಲ ಕಾರ್ಯಕ್ರಮವಾಗಿ ಸಾರಿಗೆ ಇಲಾಖೆ ಹಾಗೂ ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಸಂಯುಕ್ತಾಶ್ರಯದಲ್ಲಿ ‘ತುರ್ತು ಸೇವಾ ವಾಹನಗಳಿಗೆ ದಾರಿ ಬಿಡಿ’ ಎನ್ನುವ ಪೋಸ್ಟರ್ ಮತ್ತು ಸ್ಟಿಕ್ಕರ್ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ನಮ್ಮದಾಗಿದೆ ಎಂದು ಅವರು ತಿಳಿಸಿದರು.

ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಂತ್ ಕುಮಾರ್ ಮಾತನಾಡಿ, ಯುವಕರು ತುರ್ತು ಸೇವಾ ವಾಹನಗಳಿಗೆ ಆದ್ಯತೆಯ ಮೇರೆಗೆ ದಾರಿ ಬಿಡುವ ಕ್ರಮವನ್ನು ರೂಢಿಸಿಕೊಳ್ಳಬೇಕು. ಅಲ್ಲದೆ, ನಿಮ್ಮ ಪೋಷಕರಲ್ಲೂ ಈ ಜಾಗೃತಿಯನ್ನು ಮೂಡಿಸಬೇಕು ಎಂದು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News