×
Ad

ಓಲಾ ಕಂಪೆನಿಯ ಸಾಫ್ಟ್‌ವೇರ್ ಇಂಜಿನಿಯರ್ ಸೆರೆ

Update: 2017-08-03 19:25 IST

ಬೆಂಗಳೂರು, ಆ.3: ಆಧಾರ್‌ಗೆ ಸಂಬಂಧಿಸಿದಂತೆ ಮಾಹಿತಿ ಸೋರಿಕೆ ಮಾಡಿದ್ದ ಪ್ರಕರಣ ಸಂಬಂಧ ಓಲಾ ಕಂಪೆನಿಯ ಸಾಫ್ಟ್‌ವೇರ್ ಇಂಜಿನಿಯರ್‌ನೊಬ್ಬನನ್ನು ನಗರದ ಸೈಬರ್ ಕ್ರೈಂ ಮತ್ತು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಉತ್ತರಪ್ರದೇಶದ ನಿವಾಸಿ, ನಗರದ ಯಶವಂತಪುರದಲ್ಲಿ ವಾಸವಾಗಿದ್ದ ಅಭಿನವ ಶ್ರೀವಾತ್ಸವ(30) ಬಂಧಿತ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಪೊಲೀಸರು ಗುರುತಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಆಧಾರ್ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ಕೋರಮಂಗಲದ ಓಲಾ ಕಂಪೆನಿಯ ಕೇಂದ್ರ ಕಚೇರಿಯಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಆಗಿದ್ದ ಅಭಿನವ ಶ್ರೀವಾತ್ಸವ ಮೇಲೆ ಅನುಮಾನ ವ್ಯಕ್ತಪಡಿಸಿ ಯುನಿಕ್ ಐಡೆಂಟಿಫಿಕೇಶನ್ ಅಥಾರಟಿ ಆಫ್ ಇಂಡಿಯಾ ಸಂಸ್ಥೆಯೂ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸೈಬರ್ ಕ್ರೈಂ ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಿದರು.

ಆರೋಪಿಯು ಆಧಾರ್ ಪ್ರೈವೆಸಿ ವೆರಿಫಿಕೇಶನ್ ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಬರುವಂತೆ ಅವಕಾಶ ಕಲ್ಪಿಸಿದ್ದ. ಅಲ್ಲದೆ, ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಆಧಾರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತವಾಗಿ ಬಳಕೆ ಮಾಡುವ ಸರ್ವರ್‌ಗೆ ಕಾನೂನುಬಾಹಿರವಾಗಿ ಸಂಪರ್ಕ ಕಲ್ಪಿಸಿಕೊಂಡು ಯುಐಡಿಎಐ ಸರ್ವರ್‌ನಿಂದ ಪರೋಕ್ಷವಾಗಿ ಆಧಾರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಆರೋಪದ ಮೇಲೆ ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಯಿಂದ ನಾಲ್ಕು ಲ್ಯಾಪ್‌ಟಾಪ್, ಟ್ಯಾಬ್, ನಾಲ್ಕು ಮೊಬೈಲ್, ಆರು ಪೆನ್‌ಡ್ರೈವ್ ಸೇರಿ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ(ಅಪರಾಧ ವಿಭಾಗ) ಎಸ್.ರವಿ, ಡಿಸಿಪಿ ಡಾ.ರಾಮ್ ನಿವಾಸ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News