×
Ad

ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Update: 2017-08-04 17:34 IST

ಬೆಂಗಳೂರು, ಜು. 4: ನಗರದ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಕಲಾ ಸಂಘ ಸ್ವಾತಂತ್ರೋತ್ಸವದ ಅಂಗವಾಗಿ ಆಯೋಜಿಸಿರುವ 206ನೆ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯಪಾಲ ವಜುಬಾಯ್ ವಾಲಾ ಇಂದು ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಸಂದು 50 ವರ್ಷಗಳು ಆಗಿರುವ ಹಿನ್ನಲೆಯಲ್ಲಿ ಲಾಲ್‌ಬಾಗ್‌ನಲ್ಲಿರುವ ಗಾಜಿನ ಮನೆಯಲ್ಲಿ ವಿವಿಧ ರೀತಿಯ ಹೂಗಳಿಂದ ನಿರ್ಮಾಣ ಮಾಡಿರುವ ರಾಷ್ಟ್ರಕವಿ ಕುವೆಂಪು ಅವರ ನಿವಾಸ ‘ಕವಿಶೈಲ’ ಮತ್ತು ಕೃತಕ ಜೋಗ ಜಲಪಾತವನ್ನು ರಾಜ್ಯಪಾಲರು ಕಣ್ತುಂಬಿಕೊಂಡರು.ಲಾಲ್‌ಬಾಗ್ ಆವರಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಫಲಪುಷ್ಪಗಳಿಗೆ ಸಂಬಂಧಿಸಿದಂತೆ ಕುವೆಂಪು ರಚಿಸಿರುವ ಆಯ್ದ ಭಾಗಗಳ ‘ಕುವೆಂಪು ಪುಷ್ಪ ಸಂಕಲನ’ವನ್ನು ರಾಜ್ಯಪಾಲರು ಲೋಕಾರ್ಪಣೆಗೊಳಿಸಿದರು.

ಕುಂವೆಂಪು ಅವರ ಪುತ್ರಿ ತಾರಣಿ ಚಿದಾನಂದ್ ಮಾತನಾಡಿ, ಕುಪ್ಪಳ್ಳಿಯಲ್ಲಿರುವ ಕವಿಶೈಲದ ತದ್ರೂಪಿಯಂತೆ ಹೂಗಳಿಂದ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ಇದನ್ನು ನೋಡುತ್ತಿದ್ದರೆ ತುಂಬಾ ಸಂತೋಷ ಆಗುತ್ತಿದೆ. ತಂದೆ ಕುವೆಂಪು ಅವರು ಮೈಸೂರು ವಿವಿಯ ಕುಲಪತಿ ಆಗಿದ್ದ ವೇಳೆ ನಗರಕ್ಕೆ ಭೇಟಿ ನೀಡುತ್ತಿದ್ದರು. ಅವರ ಜೊತೆ ಇಡೀ ಕುಟುಂಬವನ್ನು ಜೊತೆಯಲ್ಲಿ ಲಾಲ್‌ಬಾಗ್‌ಗೆ ಕರೆದುಕೊಂಡು ಬರುತ್ತಿದ್ದರು ಎಂದು ಮೆಲುಕು ಹಾಕಿದರು. ತೋಟಗಾರಿಕೆ ಪಿತಾಮಹ ಮರೀಗೌಡರೊಂದಿಗೆ ಕುವೆಂಪು ಅವರು ಅವಿನಾಭಾವ ಗೆಳೆತನವಿತ್ತು. ಕುವೆಂಪು ಅವರು ಪುಷ್ಪ ಪ್ರೇಮಿಯೂ ಕೂಡ. ಮರೀಗೌಡರ ಬಳಿ ‘ಮ್ಯಾಗ್ನೋಲಿಯೋ ಪ್ಲಾಂಟ್’ ಹೂ ಸಸಿ ಬೇಕು ಎಂದು ಮನವಿ ಮಾಡಿದ್ದರು. ಮರೀಗೌಡರು ಊಟಿಯಿಂದ ಆ ಸಸಿಯನ್ನು ತಂದುಕೊಟ್ಟರು. ಏಳು ವರ್ಷಗಳ ನಂತರ ಹೂ ಬಿಡುವವರೆಗೂ ಮಗುವಿನಂತೆ ಸಸಿಯನ್ನು ಕುವೆಂಪು ಅವರು ನೋಡಿಕೊಂಡರು. ಈ ಸಸಿ ಈಗಲೂ ಜೀವಂತವಾಗಿದೆ ಎಂದು ತಿಳಿಸಿದರು.

ಕವಿಶೈಲದ ಮುಂಭಾಗ ಕುರ್ಚಿ ಮೇಲೆ ಕುಳಿತಿರುವ ಕುವೆಂಪು ಅವರ ಪುತ್ಥಳಿ ಜೀವಂತ ಕುಂವೆಂಪು ಬಂದು ಕುಳಿತಂತಿದೆ. ಅಷ್ಟು ಅದ್ಭುತವಾಗಿ ಕಲಾವಿದರು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಿರಿಯ ಸಾಹಿತಿ ಡಾ.ಹಂಪಾ ನಾಗರಾಜಯ್ಯ ಮಾತನಾಡಿ, ಕುಪ್ಪಳ್ಳಿಯಲ್ಲಿರುವ ಕವಿಶೈಲದ ನಿವಾಸ ಮತ್ತು ಅಲ್ಲಿನ ವಾತಾವರಣವನ್ನು ಲಾಲ್‌ಬಾಗ್‌ನಲ್ಲಿ ತಂದು ನಿಲ್ಲಿಸಿದಂತಿದೆ. ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರಿಗೆ ಇದಕ್ಕಿಂತಲೂ ಹೆಚ್ಚಿನದಾಗಿ ಗೌರವ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಇಲಾಖೆಯ ಆಯುಕ್ತ ಪ್ರಭಾಷ್ ಚಂದ್ರ ರೇ, ಬಿಬಿಎಂಪಿ ಮೇಯರ್ ಪದ್ಮಾವತಿ, ವಿಧಾನ ಪರಿಷತ್ತಿನ ಸದಸ್ಯ ಟಿ.ಸರವಣ, ಕುವೆಂಪು ಮೊಮ್ಮಗಳು ತಮಲಾ ಸೇರಿದಂತೆ ಇತರರು ಇದ್ದರು.

ಹಂಪಾ ಬೇಸರ: ರಾಷ್ಟ್ರಕವಿ ಕುವೆಂಪು ಅವರ ಜೊತೆ ಗುಜರಾತಿನ ಸಾಹಿತಿ ಉಮಾಶಂಕರ್ ಜೋಷಿ ಅವರು ಜ್ಞಾನಪೀಠ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು. ಗುಜರಾತಿನವರೇ ಆದ ರಾಜ್ಯಪಾಲ ವಜುಬಾಯ್ ವಾಲಾ ಅವರು ಕುವೆಂಪು ಅವರ ಕುರಿತು ಕನಿಷ್ಠ ಎರಡು ಮಾತನ್ನಾದರೂ ಆಡಬೇಕಿತ್ತು.

-ಹಂಪಾ ನಾಗರಾಜಯ್ಯ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News