ಬ್ರಿಟನ್‌ನ ಅಥ್ಲೀಟ್ ದಂತಕತೆ ಫರ‍್ಹಾ ಐತಿಹಾಸಿಕ ಸಾಧನೆ

Update: 2017-08-05 06:01 GMT

ಲಂಡನ್, ಆ.5: ಬ್ರಿಟನ್‌ನ ಅಥ್ಲೀಟ್ ಲೆಜಂಡ್ ಮುಹಮ್ಮದ್ ಫರ‍್ಹಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 10,000 ಮೀ. ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಜಾಗತಿಕ ಮಟ್ಟದ ಟೂರ್ನಿಯಲ್ಲಿ ಸತತ 10ನೆ ಪ್ರಶಸ್ತಿಯನ್ನು ಗೆದ್ದುಕೊಂಡ ಮೊದಲ ಅಥ್ಲೀಟ್ ಎನಿಸಿಕೊಳ್ಳುವುದರೊಂದಿಗೆ ಹೊಸ ಇತಿಹಾಸ ಬರೆದರು.

2012ರಲ್ಲಿ ಲಂಡನ್ ಸ್ಟೇಡಿಯಂನಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ಸ್‌ನಲ್ಲಿ ಫರ‍್ಹಾ ಚಿನ್ನದ ಪದಕ ಜಯಿಸಿದ್ದರು. ಶುಕ್ರವಾರ ನಡೆದ 10,000 ಮೀ. ಓಟದಲ್ಲಿ 26 ನಿಮಿಷ 49.51 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಈ ಮೂಲಕ ಬ್ರಿಟಿನ್‌ನ ಶ್ರೇಷ್ಠ ದೂರ ಅಂತರದ ಓಟಗಾರನೆಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದಾರೆ.

34ರ ಹರೆಯದ ಫರ‍್ಹಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರನೆ ಪ್ರಶಸ್ತಿ ಪಡೆದರು. 10,000 ಮೀ. ಓಟದಲ್ಲಿ ಮೂರನೆ ಬಾರಿ ಈ ಸಾಧನೆ ಮಾಡಿದರು. 2013ರಲ್ಲಿ ಮಾಸ್ಕೊ ಹಾಗೂ 2 ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ 10,000 ಮೀ. ಓಟದಲ್ಲಿ ಮೊದಲ ಸ್ಥಾನಿಯಾಗಿದ್ದರು.

 10,000 ಓಟದಲ್ಲಿ ಉಗಾಂಡದ ಯುವ ಓಟಗಾರ ಜೊಶುವಾ ಚೆಪ್ಟೆಗಿ(26:49.94 ಸೆ.) ಬೆಳ್ಳಿ ಪದಕವನ್ನು ಗೆದ್ದುಕೊಂಡರೆ, ಕೀನ್ಯದ ಪಾಲ್ ಟನುಲ್(26:50.60 ಸೆಕೆಂಡ್) ಕಂಚು ಜಯಿಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ಟ್ರಾಕ್‌ನಿಂದ ನಿವೃತ್ತಿಯಾಗಲಿರುವ ಫರ್ಹಾ ಶನಿವಾರ ನಡೆಯಲಿರುವ 5000 ಮೀ. ಓಟದತ್ತ ಗಮನ ಹರಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಸತತ ಮೂರನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

100 ಮೀ. ಓಟ: ಬೋಲ್ಟ್ ಸೆಮಿ ಫೈನಲ್‌ಗೆ

'ಓಟದ ರಾಜ' ಖ್ಯಾತಿಯ ಉಸೇನ್ ಬೋಲ್ಟ್ ವಿಶ್ವ ಚಾಂಪಿಯನ್‌ಶಿಪ್‌ನ ತನ್ನ ವಿದಾಯದ 100 ಮೀ. ಓಟದ ಸ್ಪರ್ಧೆಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

100 ಮೀ. ಓಟದ ಮೊದಲ ಸುತ್ತಿನ ಹೀಟ್‌ನಲ್ಲಿ 10.07 ನಿಮಿಷದಲ್ಲಿ ಗುರಿ ತಲುಪಿದ ಬೋಲ್ಟ್ ಸೆಮಿಫೈನಲ್‌ಗೆ ತಲುಪಿದ್ದಾರೆ.

ಜಮೈಕಾದ ಓಟಗಾರ ಬೋಲ್ಟ್ 100 ಮೀ. ಓಟದಲ್ಲಿ ನಾಲ್ಕನೆ ಚಿನ್ನದ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.2011ರ ಆವೃತ್ತಿಯನ್ನು ಹೊರತುಪಡಿಸಿ 2009ರ ನಂತರ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಉಳಿದೆಲ್ಲಾ ಆವೃತ್ತಿಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

100 ಮೀ. ಓಟದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಶನಿವಾರ ನಡೆಯಲಿದೆ. ಬೋಲ್ಟ್ 4-100 ಮೀ. ರಿಲೇಯಲ್ಲಿ ಭಾಗವಹಿಸಲಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಚಾಂಪಿಯನ್‌ಶಿಪ್‌ಗೆ ವಿದಾಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News