ದ್ವಿತೀಯ ಟೆಸ್ಟ್: ಫಾಲೋ-ಆನ್‌ಗೆ ಸಿಲುಕಿದ ಶ್ರೀಲಂಕಾ 209/2

Update: 2017-08-05 11:57 GMT

 ಕೊಲಂಬೊ,ಆ.4: ಭಾರತ ವಿರುದ್ಧ ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟಾಗಿ ಫಾಲೋ ಆನ್‌ಗೆ ಸಿಲುಕಿದ್ದ ಶ್ರೀಲಂಕಾ ತಂಡ ಎರಡನೆ ಇನಿಂಗ್ಸ್‌ನಲ್ಲಿ ಚೇತರಿಕೆಯ ಪ್ರದರ್ಶನ ನೀಡಿದೆ.

ಮೂರನೆ ದಿನದಾಟದಂತ್ಯಕ್ಕೆ ಶ್ರೀಲಂಕಾ ತಂಡ 2 ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿದೆ. ಕುಶಾಲ್ ಮೆಂಡಿಸ್(110) ಶತಕ ಬಾರಿಸಿದರೆ, ಆರಂಭಿಕ ಆಟಗಾರ ಕರುಣರತ್ನೆ ಅಜೇಯ 92 ರನ್ ಗಳಿಸಿದ್ದಾರೆ. ಶ್ರೀಲಂಕಾ 3ನೆ ಓವರ್‌ನಲ್ಲಿ ಉಪುಲ್ ತರಂಗ ವಿಕೆಟ್‌ನ್ನು ಕಳೆದುಕೊಂಡು ಮತ್ತೊಮ್ಮೆ ಕಳಪೆ ಆರಂಭಪಡೆದಿತ್ತು. ಆಗ ಎರಡನೆ ವಿಕೆಟ್‌ಗೆ 191 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಇದಕ್ಕೆ ಮೊದಲು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(5-69) ನೇತೃತ್ವದ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಶ್ರೀಲಂಕಾ ತಂಡ ದ್ವಿತೀಯ ಟೆಸ್ಟ್‌ನ 3ನೆ ದಿನವಾದ ಶನಿವಾರ ಮೊದಲ ಇನಿಂಗ್ಸ್‌ನಲ್ಲಿ ಕೇವಲ 183 ರನ್‌ಗೆ ಆಲೌಟಾಗುವ ಮೂಲಕ ಫಾಲೋ-ಆನ್‌ಗೆ ಸಿಲುಕಿತು.

ಭಾರತದ ಮೊದಲ ಇನಿಂಗ್ಸ್ 622 ರನ್‌ಗೆ ಉತ್ತರಿಸಹೊರಟ ಶ್ರೀಲಂಕಾದ ಪರ ಡಿಕ್ವೆಲ್ಲಾ(51)ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್‌ಮನ್ ಹೋರಾಟವನ್ನು ನೀಡಲಿಲ್ಲ. ಡಿಕ್ವೆಲ್ಲಾ ಕೇವಲ 44 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ಗಳ ಸಹಿತ ವೇಗದ ಅರ್ಧಶತಕ ಬಾರಿಸಿ ಗಮನ ಸೆಳೆದರು.

ಭಾರತದ ಬೃಹತ್ ಮೊತ್ತವನ್ನು ನೋಡಿಯೇ ಮೂರ್ಛೆ ಹೋದವರಂತೆ ವರ್ತಿಸಿದ ಶ್ರೀಲಂಕಾದ ಪರ ಮ್ಯಾಥ್ಯೂಸ್(26) ಕರುಣರತ್ನೆ(25), ಪೆರೇರ(25), ಕುಶಾಲ್ ಮೆಂಡಿಸ್(24)ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಆರ್.ಅಶ್ವಿನ್ 26ನೆ ಬಾರಿ ಟೆಸ್ಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದರು. ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ ರವೀಂದ್ರ ಜಡೇಜ(2-84) ಹಾಗೂ ಮುಹಮ್ಮದ್ ಶಮಿ(2-13) ಅಶ್ವಿನ್‌ಗೆ ಉತ್ತಮ ಸಾಥ್ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗೆ ತನ್ನ ಹೋರಾಟವನ್ನು ಕೊನೆಗೊಳಿಸಿದ ಶ್ರೀಲಂಕಾ 439 ರನ್ ಹಿನ್ನಡೆ ಅನುಭವಿಸಿತು. ಭಾರತದ ನಾಯಕ ಕೊಹ್ಲಿ ಹೆಚ್ಚು ಯೋಚಿಸದೇ ಶ್ರೀಲಂಕಾವನ್ನು ಮತ್ತೆ ಬ್ಯಾಟಿಂಗ್‌ಗೆ ಇಳಿಸಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News