ಕಾನೂನು ಮೀರಿಲ್ಲ, ಸೂಕ್ತ ಸಂದರ್ಭದಲ್ಲಿ ಉತ್ತರಿಸುವೆ: ಡಿಕೆಶಿ
ಬೆಂಗಳೂರು, ಆ. 5: ‘ಎಲ್ಲದಕ್ಕೂ ದಾಖಲೆ ಆಧರಿಸಿ ಎಲ್ಲರಿಗೂ ತಾನೂ ಸೂಕ್ತ ಸಂದರ್ಭದಲ್ಲೆ ಉತ್ತರ ನೀಡುತ್ತೇನೆ. ಸತ್ಯಾಂಶವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಕಾನೂನು ಮೀರಿ ಯಾವುದನ್ನು ತಾನು ಮಾಡಿಲ್ಲ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಣೆ ನೀಡಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸತತ ನಾಲ್ಕು ದಿನಗಳಿಂದ ಕೈಗೊಂಡಿದ್ದ ಪರಿಶೀಲನೆ ಕಾರ್ಯ ಮುಕ್ತಾಯದ ಬಳಿಕ ಬೆಳಗ್ಗೆ ತಮ್ಮ ಸದಾಶಿವನಗರದಲ್ಲಿನ ನಿವಾಸದಲ್ಲಿ ಹೊಸ ಬಟ್ಟೆಯುಟ್ಟು ಹಸನ್ಮುಖರಾಗಿಯೇ ಹೊರ ಬಂದ ಶಿವಕುಮಾರ್, ಸೂಕ್ತ ಕಾಲದಲ್ಲಿ ಎಲ್ಲದಕ್ಕೂ ದಾಖಲೆ ಸಮೇತ ಉತ್ತರ ನೀಡುವೆ. ಸಂವಿಧಾನವನ್ನು ಗೌರವಿಸುವವನು ನಾನು, ಅದನ್ನು ಎಂದೂ ಮೀರಿಲ್ಲ, ಮೀರಿಯೂ ನಡೆಯುವುದಿಲ್ಲ ಎಂದರು.
ಐಟಿ ಅಧಿಕಾರಿಗಳು ನನ್ನ ಮನೆ, ಆಪ್ತರು ಹಾಗೂ ಸಂಬಂಧಿಕರ ಮನೆಯಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಏನೆಲ್ಲಾ ವಶಪಡಿಸಿಕೊಂಡಿದ್ದಾರೆನ್ನುವ ಬಗ್ಗೆ ಈಗ ಹೇಳುವುದಿಲ್ಲ. ನಿಮ್ಮ ಪ್ರಶ್ನೆಗಳಿಗೆ ದಾಖಲೆಯಿಲ್ಲದೆ ಉತ್ತರಿಸಲಾರೆ. ಅಂತಹ ಪರಿಸ್ಥಿತಿಯಲ್ಲೂ ಇಲ್ಲ. ಪಂಚನಾಮೆ ವರದಿ ಬಂದ ನಂತರ ಎಲ್ಲರಿಗೂ ವಿವರವಾಗಿ ಹೇಳುತ್ತೇನೆ, ಪಲಾಯನ ಜಾಯಮಾನ ನನ್ನದಲ್ಲ ಎಂದು ಉತ್ತರಿಸಿದರು.
ತಾನು ಕಷ್ಟ ಕಾಲದಲ್ಲಿರುವ ವೇಳೆ ಬೆಂಬಲಕ್ಕೆ ನಿಂತ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಸಲ್ಲಿಸುವೆ. ಯಾವುದನ್ನೂ ಮುಚ್ಚಡಲು ಸಾಧ್ಯವಿಲ್ಲ. ಎಲ್ಲ ಸತ್ಯ ಶೀಘ್ರದಲ್ಲೆ ಬಹಿರಂಗವಾಗಲಿದೆ ಎಂದ ಶಿವಕುಮಾರ್ ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಕಬ್ಬಾಳಮ್ಮನ ದರ್ಶ: ತಾನು ನಂಬಿರುವ ಕಬ್ಬಾಳಮ್ಮನ ದರ್ಶನಕ್ಕೆ ಹೊರಟ್ಟಿದ್ದೇನೆ. ಆ ಬಳಿಕ ನನ್ನನ್ನು ನಂಬಿ ದೂರದ ಗುಜರಾತ್‌ನಿಂದ ಆಗಮಿಸಿರುವ ಶಾಸಕರನ್ನು ಭೇಟಿ ಮಾಡುತ್ತೇನೆ. ಯಾವುದಕ್ಕೂ ತಾನು ಹೆದರುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.
ದಾಳಿ ಅಂತ್ಯ: ಇಂಧನ ಸಚಿವ ಶಿವಕುಮಾರ್ ಮತ್ತವರ ಆಪ್ತರು ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ನಾಲ್ಕು ದಿನಗಳಿಂದ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಅಗತ್ಯ ಮಾಹಿತಿ ಪಡೆದುಕೊಂಡ ದಾಳಿಯನ್ನು ಅಂತ್ಯಗೊಳಿಸಿದ್ದಾರೆ.
ಆ ಬಳಿಕ ತಮ್ಮ ಪುತ್ರಿಯೊಂದಿಗೆ ವಿಜಯನಗರದ ಮೂಡಲಪಾಳ್ಯದಲ್ಲಿರುವ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು. ಅಲ್ಲಿಂದ ಕನಕಪುರ ಸಮೀಪದ ಕಬ್ಬಾಳಮ್ಮ ದೇವಿ ದರ್ಶನ ಪಡೆದು, ನೇರವಾಗಿ ರೆಸಾರ್ಟ್‌ನಲ್ಲಿರುವ ಗುಜರಾತ್ ಶಾಸಕರನ್ನು ಭೇಟಿ ಮಾಡಿದರು.
ಶಕ್ತಿ ಪ್ರದರ್ಶನ: ನಗರದಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರು ಎರಡು ಬಸ್ಸುಗಳಲ್ಲಿ ರಾಜಭವನಕ್ಕೆ ಆಗಮಿಸಿ, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಅನಂತರ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಭೇಟಿ ನೀಡಿ, ಶಿವಕುಮಾರ್ ಅವರೊಂದಿಗೆ ಶಕ್ತಿ ಪ್ರದರ್ಶನ ಮಾಡಿದರು.
ಇದೇ ಸಂದರ್ಭದಲ್ಲಿ ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆ ಇರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುತ್ಥಳಿಗೆ ನಮನ ಸಲ್ಲಿಸಿ, ಗಾಂಧಿಜೀಯರ ‘ರುಘುಪತಿ ರಾಘವ ರಾಜಾರಾಂ’ ಪದವನ್ನು ಎಲ್ಲರೂ ಒಕ್ಕೂರಲಿನಲ್ಲಿ ಹಾಡಿದರು. ಅನಂತರ ಗಾಂಧಿಜೀಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ಅಲ್ಲಿಂದ ಗುಜರಾತ್ ಶಾಸಕರು ವಿಧಾನಸೌಧದ ದಕ್ಷಿಣ ದ್ವಾರದ ಮೂಲಕ ಒಳಗೆ ಪ್ರವೇಶಿಸಿ ಮೇಲ್ಮನೆ ಮತ್ತು ವಿಧಾನಸಭೆ ಸಭಾಂಗಣ, ಸಚಿವ ಸಂಪುಟ ಸಭಾ ಮಂದಿರ, ಮುಖ್ಯಮಂತ್ರಿ ಕೊಠಡಿ ಸೇರಿದಂತೆ ಶಕ್ತಿಕೇಂದ್ರವನ್ನು ಸುತ್ತ ಹಾಕಿದರು.
ಅನಂತರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಿವಕುಮಾರ್, ಆರೋಗ್ಯ ಸಚಿವ ಶಿವಕುಮಾರ್ ಅವರೊಂದಿಗೆ ಗುಜರಾತ್ ಶಾಸಕರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಅತ್ಯಂತ ಲವಲವಿಕೆಯಿಂದಲೇ ಶಾಸಕರೊಂದಿಗೆ ಪಾಲ್ಗೊಂಡಿದ್ದರು.
ಏಕಾಏಕಿ ಗುಜರಾತ್ ಶಾಸಕರು ಶಕ್ತಿ ಕೇಂದ್ರಕ್ಕೆ ಆಗಮಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಹಿನ್ನೆಲೆಯಲ್ಲಿ ವಿಧಾನಸೌಧದ ಸಿಬ್ಬಂದಿ ಕುತೂಹಲದಿಂದ ವೀಕ್ಷಿಸಿದರು. ಆ ಬಳಿಕ ಎಲ್ಲ ಶಾಸಕರು ಕೆಎಸ್ಸಾರ್ಟಿಸಿ ಐರಾವತ ಬಸ್ಸಿನಲ್ಲಿ ಬೆಂಗಳೂರು ಹೊರ ವಲಯದ ಈಗಲ್‌ಟನ್ ರೆಸಾರ್ಟ್‌ಗೆ ತೆರಳಿದರು.
ಕಿವಿ ಮೇಲೆ ಹೂವು ಇಟ್ಟುಕೊಂಡು ಬಂದಿಲ್ಲ: ‘ತಾನು ಹಳ್ಳಿಯಿಂದ ಬಂದವನು. ಆದರೆ, ಕಿವಿ ಮೇಲೆ ಹೂವು ಇಟ್ಟುಕೊಂಡು ಬಂದಿಲ್ಲ. ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೇನೆ. ಎಲ್ಲದಕ್ಕೂ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ನೀಡುತ್ತೇನೆ’
-ಡಿ.ಕೆ.ಶಿವಕುಮಾರ್ ಇಂಧನ ಸಚಿವ