ಎಸಿ, ಫ್ರಿಡ್ಜ್ ಇದ್ದರೆ ಸರ್ಕಾರಿ ಸೌಲಭ್ಯ ಇಲ್ಲ!

Update: 2017-08-07 04:16 GMT

ಹೊಸದಿಲ್ಲಿ, ಆ.7: ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಬೇಕಿದ್ದರೆ ನಿಮ್ಮಲ್ಲಿ ಕಾರು, ಹವಾನಿಯಂತ್ರಿತ ವ್ಯವಸ್ಥೆ, ನಾಲ್ಕು ಕೋಣೆಯ ಮನೆ ಇರುವಂತಿಲ್ಲ. ಇಷ್ಟು ಮಾತ್ರವಲ್ಲ ಫ್ರಿಡ್ಜ್, ವಾಷಿಂಗ್ ಮೆಷಿನ್ ಮತ್ತು ದ್ವಿಚಕ್ರವಾಹನ ಇವು ಮೂರು ನಿಮ್ಮಲ್ಲಿದ್ದರೂ ನೀವು ಸರ್ಕಾರಿ ಸೌಲಭ್ಯಕ್ಕೆ ಅನರ್ಹರಾಗುತ್ತೀರಿ. ಸರ್ಕಾರ ನೇಮಿಸಿದ ಉನ್ನತ ಮಟ್ಟದ ಆಯೋಗದ ಶಿಫಾರಸುಗಳು ಜಾರಿಯಾದಲ್ಲಿ ಹೊಸ ಮಾನದಂಡ ಅನುಸರಿಸಬೇಕಾಗುತ್ತದೆ.

ನಗರದಲ್ಲಿ ವಾಸಿಸುವ ಪ್ರತೀ 10 ಕುಟುಂಬಗಳ ಪೈಕಿ ಆರು ಕುಟುಂಬಗಳನ್ನು ಮೌಲ್ಯಮಾಪನಕ್ಕಾಗಿ ಗುರುತಿಸಿ, ಈ ಕುಟುಂಬಗಳು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅರ್ಹವೇ ಎಂಬ ಸಮೀಕ್ಷೆ ನಡೆಸಲಾಗುವುದು ಎಂದು ವಿವೇಕ್ ದೇವರಾಯ್ ಸಮಿತಿ ಕೇಂದ್ರಕ್ಕೆ ಸಲ್ಲಿಸಿದ ತನ್ನ ಶಿಫಾರಸಿನಲ್ಲಿ ತಿಳಿಸಿದೆ. ಸಾಮಾಜಿಕ ಆರ್ಥಿಕ ಸಮೀಕ್ಷೆಯ ಅನುಷ್ಠಾನಕ್ಕೆ ಶಿಫಾರಸ್ಸು ಮಾಡುವ ಸಲುವಾಗಿ ಈ ಸಮಿತಿ ನೇಮಿಸಲಾಗಿತ್ತು.

ನಿವಾಸ, ವೃತ್ತಿ ಹಾಗೂ ಸಾಮಾಜಿಕ ದುರ್ಬಲತೆ ಮಾನದಂಡದಲ್ಲಿ ಯಾವ ಕುಟುಂಬಗಳನ್ನು ನೇರವಾಗಿ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಪಟ್ಟಿಗೆ ಸೇರಿಸಬಹುದು ಎನ್ನುವುದನ್ನೂ ಸಮಿತಿ ಶಿಫಾರಸು ಮಾಡಿದೆ. ಮನೆ ಇಲ್ಲದವರು ಅಥವಾ ಪಾಲಿಥಿನ್ ಗೋಡೆ ಅಥವಾ ಛಾವಣಿ ಇರುವ ಮನೆಗಳಲ್ಲಿ ವಾಸಿಸುವ ಕುಟುಂಬಗಳು, ಆದಾಯ ಇಲ್ಲದ ಕುಟುಂಬಗಳು ಅಥವಾ ವಯಸ್ಕ ಪುರುಷರು ಇಲ್ಲದ ಕುಟುಂಬಗಳನ್ನು ಯಾವ ಪರಿಶೀಲನೆಯೂ ಇಲ್ಲದೇ ಪಟ್ಟಿಗೆ ಸೇರಿಸಲಾಗುತ್ತದೆ. ಉಳಿದೆಲ್ಲ ಕುಟುಂಬಗಳ ಮೌಲ್ಯಮಾಪನ ಮಾಡಿ ಬಳಿಕ ಅರ್ಹರೆನಿಸಿದರೆ ಪಟ್ಟಿಗೆ ಸೇರಿಸಲಾಗುತ್ತದೆ. ಸೊನ್ನೆಯಿಂದ 12 ಸೂಚ್ಯಂಕಗಳ ಮಾನದಂಡವನ್ನು ಅನುಸರಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಇದೇ ಕಾರಣಕ್ಕೆ ಹಿಂದೆ ಎಸ್.ಆರ್.ಹುಸೈನ್ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದರೆ ಆ ವರದಿಯ ಯಾವ ಅಂಶಗಳಲ್ಲೂ ಸರ್ಕಾರ ಅನುಷ್ಠಾನಗೊಳಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News