ಬಿಜೆಪಿ ಸೇರುವಂತೆ ಡಿ.ಕೆ.ಶಿವಕುಮಾರ್ ಜೊತೆ ಮಾತುಕತೆ ನಡೆಸಿಲ್ಲ: ಸುರೇಶ್‌ಕುಮಾರ್ ಸ್ಪಷ್ಟಣೆ
ಬೆಂಗಳೂರು, ಆ.7: ಐಟಿ ದಾಳಿಗೂ ಮುನ್ನ ಬಿಜೆಪಿ ಪಕ್ಷ ಸೇರುವಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಬಳಿ ಬಿಜೆಪಿಯ ಯಾವ ಮುಖಂಡರೂ ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿಲ್ಲ ಎಂದು ಬಿಜೆಪಿ ವಕ್ತಾರ ಸುರೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ವರದಿಗಾರರ ಪ್ರಶ್ನೆಯನ್ನು ತಳ್ಳಿ ಹಾಕಿದ ಅವರು, ಐಟಿ ದಾಳಿಗೂ ಮೊದಲು ಬಿಜೆಪಿಯ ಯಾವೊಬ್ಬ ಮುಖಂಡರು ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷದ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಏನೇ ಆದರೂ ಬಿಜೆಪಿಯತ್ತ ಬೊಟ್ಟು ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ವರುಣ ಮುನಿಸಿಕೊಂಡಿರುವುದಕ್ಕೂ ಬಿಜೆಪಿಯವರೇ ಕಾರಣ ಎಂದು ಆರೋಪಿಸಲೂಬಹುದು ಎಂದು ಲೇವಡಿ ಮಾಡಿದರು.
ಪಕ್ಷದ ನಿಲುವು: ರಾಜೀನಾಮೆ ಪಕ್ಷದ ನಿಲುವು ಐಟಿ ದಾಳಿಗೆ ಒಳಗಾದ ಸಚಿವ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು ಎಂಬ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆ ಪಕ್ಷದ ನಿಲುವು ಎಂದು ಹೇಳಿದರು.
ಈ ವಿಚಾರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ದಾಳಿಯನ್ನು ಎದುರಿಸುವ ಶಕ್ತಿ ಇದೆ ಎಂದು ಹೇಳಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಡಿ.ಕೆ.ಶಿವಕುಮಾರ್ ಕುರಿತು ಯಡಿಯೂರಪ್ಪ ಮೃದು ಧೋರಣೆ ಹೊಂದಿದ್ದಾರೆ ಎಂಬ ಮಾತು ಸುಳ್ಳು ಎಂದು ವಾದಿಸಿದರು.