×
Ad

ಸ್ತನ್ಯಪಾನ ಯಶಸ್ಸಿಗೆ ಕುಟುಂಬದ ಸಹಕಾರ ಅಗತ್ಯ

Update: 2017-08-07 17:55 IST

ಬೆಂಗಳೂರು, ಆ.7: ಮಗು ಹುಟ್ಟಿದ ಅರ್ಧ ಗಂಟೆಯ ಒಳಗಾಗಿ ತಾಯಿ ಎದೆಹಾಲು ಉಣಿಸುವಂತೆ ಪ್ರೋತ್ಸಾಹ ಮತ್ತು ಸಹಾಯ ಮಾಡಬೇಕು ಎಂಬುದರ ಕುರಿತು ಕಳೆದ ಒಂದು ವಾರದಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ನಗರದಾದ್ಯಂತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬಿಬಿಎಂಪಿ ವತಿಯಿಂದ ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವರ್ಷ ಸ್ತನ್ಯಪಾನ ಕೇವಲ ಬಾಣಂತಿಯರ ಜವಾಬ್ದಾರಿ ಮಾತ್ರವಲ್ಲ. ಇದರಲ್ಲಿ ಕುಟುಂಬದ ಸಹಕಾರದ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು.

ಸ್ತನ್ಯಪಾನ ಸಮಯದಲ್ಲಿ ಬಾಣಂತಿ ಮಹಿಳೆ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರಬೇಕಾಗುತ್ತದೆ. ಇದಕ್ಕಾಗಿ ಇಡೀ ಕುಟುಂಬ ಬಾಣಂತಿ ಮಹಿಳೆಯ ಜೊತೆಗಿದ್ದು, ಆಕೆಯ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಮಾನಸಿಕ ನೆಮ್ಮದಿಯನ್ನು ಉಂಟುಮಾಡುವುದು ಕುಟುಂಬದ ಕರ್ತವ್ಯವಾಗಿದೆ ಎಂಬುದರ ಕುರಿತು ಸ್ತನ್ಯಪಾನ ಸಪ್ತಾಹದಲ್ಲಿ ಜಾಗೃತಿ ಮೂಡಿಸಲಾಗಿದೆ.

ಈ ಕುರಿತು ನಂದಿನಿ ಲೇಔಟ್ ಹೆರಿಗೆ ಆಸ್ಪತ್ರೆಯ ಡಾ.ರಕ್ಷಾ ಮಾತನಾಡಿ, ಸ್ತನ್ಯಪಾನ ಸಪ್ತಾಹವನ್ನು ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳಲ್ಲಿ ಕಳೆದ 7ದಿನದಿಂದ ಯಶಸ್ವಿಯಾಗಿ ಆಚರಿಸಲಾಯಿತು. ಸಪ್ತಾಹ ದಿನಗಳಲ್ಲಿ ಆಸ್ಪತ್ರೆಗಳಿಗೆ ಬರುವ ಪ್ರತಿಯೊಬ್ಬರಿಗೂ ಸ್ತನ್ಯಪಾನದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು ಎಂದರು.
 ಈ ಬಾರಿ ಆಶಾಕಾರ್ಯಕರ್ತೆಯರು ಹಾಗೂ ಸಿಫಾರ್ ಸೇರಿದಂತೆ ಹಲವು ಎನ್‌ಜಿಒಗಳು ಸ್ತನ್ಯಪಾನ ಸಪ್ತಾಹದಲ್ಲಿ ಸಕ್ರಿಯ ಭಾಗವಹಿಸಿದ್ದವು. ನಮ್ಮಿಂದಿಗೆ ಸಹಕರಿಸಿದ್ದ ರೋಟರಿ ಕ್ಲಬ್ ಸಂಸ್ಥೆಯು ಬಾಣಂತಿಯರಿಗೆ ಉಚಿತ ರಗ್ಗುಗಳನ್ನು ವಿತರಿಸಿದರು. ಒಟ್ಟಾರೆ ಸ್ತನ್ಯಪಾನ ಸಪ್ತಾಹವು ಜನತೆಗೆ ಎದೆಹಾಲಿನ ಮಹತ್ವನ್ನು ಮುಟ್ಟಿಸುವಲ್ಲಿ ಯಶಸ್ವಿಯಾಯಿತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ತನ್ಯಪಾನ ಸಪ್ತಾಹವು ಬೆಂಗಳೂರು ಜಿಲ್ಲೆಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈಗಾಗಲೆ ಮಹಿಳೆಯರಿಗೆ ಸ್ತನ್ಯಪಾನದ ಕುರಿತು ಜಾಗೃತಿ ಇದೆ. ಇವರ ಜೊತೆಗೆ ಕುಟುಂಬದಲ್ಲಿರುವ ಪುರುಷ ಸದಸ್ಯರಿಗೆ ಅರಿವು ಮೂಡಿಸುವುದು ತೀರ ಅಗತ್ಯವಿತ್ತು. ಹೀಗಾಗಿ ಈ ವರ್ಷದ ಸಪ್ತಾಹದಲ್ಲಿ ಮುಖ್ಯವಾಗಿ ಕುಟುಂಬದ ಪುರುಷ ಸದಸ್ಯರಿಗೆ ಸ್ತನ್ಯಪಾನದ ಕುರಿತು ಹೆಚ್ಚಿನ ಅರಿವನ್ನು ಮೂಡಿಸಲಾಯಿತು.
-ಡಾ.ರಕ್ಷಾ, ಅಸಿಸ್ಟೆಂಟ್ ಸರ್ಜನ್, ನಂದಿನಿ ಲೇಔಟ್ ಹೆರಿಗೆ ಆಸ್ಪತ್ರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News