×
Ad

ಭ್ರಷ್ಟಾಚಾರ ನಿರ್ಮೂಲನೆಗೆ ಜನತೆಯ ಸಹಕಾರ ಅಗತ್ಯ: ವಿಶ್ವನಾಥ ಶೆಟ್ಟಿ

Update: 2017-08-07 17:58 IST

ಬೆಂಗಳೂರು, ಆ.7: ರಾಜ್ಯದಲ್ಲಿನ ಭ್ರಷ್ಟಾಚಾರದ ನಿರ್ಮೂಲನೆಗೆ ಲೋಕಾಯುಕ್ತ ಸಂಸ್ಥೆಯೊಂದಿಗೆ ಸಾಮಾನ್ಯ ಜನತೆಯ ಸಹಕಾರ ತೀರ ಅಗತ್ಯವಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅಭಿಪ್ರಾಯಿಸಿದ್ದಾರೆ.

ಸೋಮವಾರ ನಗರದ ಶ್ರೀರಾಂಪುರದಲ್ಲಿರುವ ಭಾರತೀಯ ವಿದ್ಯಾಭವನ ಬಿಬಿಎಂಪಿ ಶಾಲೆಯಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಪಟ್ಟಭದ್ರರು ಸಮಾಜದಲ್ಲಿ ನಡೆಸುವ ಅನ್ಯಾಯ, ಭ್ರಷ್ಟಾಚಾರವನ್ನು ತಡೆಯಲು ಕೇವಲ ಲೋಕಾಯುಕ್ತ ಸಂಸ್ಥೆಯಿಂದ ಮಾತ್ರ ಸಾಧ್ಯವಿಲ್ಲ. ನಮ್ಮೆಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ತಿಳಿಸಿದರು.

ಪ್ರತಿಯೊಬ್ಬರು ತಮ್ಮ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಬಹುದು. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಪ್ರತಿಯೊಬ್ಬರೂ ದೂರದೃಷ್ಟಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಅವರು ಆಶಿಸಿದರು.

ಎಲ್ಲೆಯನ್ನು ಮೀರಲಿ: ರಕ್ಷಾಬಂಧನ ಕೇವಲ ಒಡಹುಟ್ಟಿದ ಅಣ್ಣ ತಮ್ಮಂದಿರಿಗೆ ಸೀಮಿತವಾಗದೆ ಪರಿಸರದಲ್ಲಿರುವ ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುವ ಹಬ್ಬವಾಗಬೇಕು. ಮತ, ಜಾತಿಗೆ ಸೀಮಿತವಾಗದೆ ಸಮಾಜದಲ್ಲಿರುವ ಎಲ್ಲರೂ ಅಣ್ಣ ತಮ್ಮಂದಿರಾಗಿ ಕುಟುಂಬದ ರೀತಿ ಬದುಕಬೇಕೆಂದು ಅವರು ತಿಳಿಸಿದರು.

ಮತನಿರಪೇಕ್ಷ ರಾಕಿಹಬ್ಬ: ನಿವೃತ್ತ ರಾಜ್ಯಪಾಲ ರಾಮಾಜೋಯಿಸ್ ಮಾತನಾಡಿ, ರಕ್ಷಾಬಂಧನವು ಮತನಿರಪೇಕ್ಷ ಹಬ್ಬವಾಗಿದೆ. ಜಾತಿ, ಪಂಗಡ ಮೀರಿ ನಿಂತು ಒಂದಾಗಿ ಎಲ್ಲರೂ ನಮ್ಮವರು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಸಮಾಜದಲ್ಲಿ ಸದ್ಯ ನಡೆಯುತ್ತಿರುವ ನೀರಿನ ಜಗಳ, ಭಾಷಾ ಜಗಳ, ಜಾತಿ ನಿಂದನೆ, ಅಸಮಾನತೆ ಮುಂತಾದ ವಿಚಾರಗಳನ್ನು ನಿವಾರಿಸಲು ರಕ್ಷಾಬಂಧನ ರಾಮಬಾಣವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಪರಸ್ಪರ ರಾಕಿ ಕಟ್ಟಿದರು. ಇದರ ಜೊತೆ ರಕ್ಷಾಬಂಧನದ ಮಹತ್ವವನ್ನು ಸಾರಲಾಯಿತು. ವೇದಿಕೆಯಲ್ಲಿ ಭಾರತೀಯ ವಿದ್ಯಾಭವನದ ನಿರ್ದೇಶಕ ರಾಘವನ್, ಸುರೇಶ್, ರಜನಿ ಸೇರಿದಂತೆ ಗಣ್ಯರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News