ಗೂಬೆ ಬಿಟ್ಟು ಮನೆ ಖಾಲಿ ಮಾಡಿಸಿದ ಟೆಕ್ಕಿ ಬಂಧನ
ಬೆಂಗಳೂರು, ಆ.7: ಗೂಬೆ ಮನೆಗೆ ಬಂದರೆ ಅನಿಷ್ಟ, ಅಪಶಕುನ ಎಂದು ಭಾವಿಸಿ ಮನೆಯನ್ನೆ ಖಾಲಿ ಮಾಡುವ ಮೂಢನಂಬಿಕೆಯನ್ನು ಬಂಡವಾಳ ಮಾಡಿಕೊಂಡು, ಮನೆಯೊಂದನ್ನು ಖಾಲಿ ಮಾಡಲು ಸಂಚು ರೂಪಿಸಿದ್ದ ಟೆಕ್ಕಿ ಸೇರಿ ನಾಲ್ವರ ಗುಂಪೊಂದನ್ನು ಬಂಧಿಸುವ ಮೂಲಕ ಬೆಳಕಿಗೆ ಬಂದಿದೆ.
ಗೂಬೆ ಮನೆಯೊಳಗೆ ಬಿಟ್ಟು ಅನಿಷ್ಟ ಮನೆಯನ್ನು ಖಾಲಿ ಮಾಡಲು ಸಂಚು ರೂಪಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೇರಿ ಐವರನ್ನು ಕಾಟನ್‌ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಜಸ್ತಾನ ಮೂಲದ ಟೆಕ್ಕಿ ಮನಮೋಹನ್, ಮುದೀರ್, ಸಲೀಂ, ಝುಬೇರ್ ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಟೆಕ್ಕಿ ಮನಮೋಹನ್ ವಿವಾದಿತ ಮನೆಯೊಂದನ್ನು ಖಾಲಿ ಮಾಡಿಸಲು ಗೂಬೆಯನ್ನು ಬಳಸಲು ಪ್ಲಾನ್ ರೂಪಿಸಿದ ಎನ್ನಲಾಗಿದೆ.
ಮನೆ ಖಾಲಿಗಾಗಿ ಹುಣಸೂರಿನ ಅರಣ್ಯದಲ್ಲಿ ಗೂಬೆಯೊಂದನ್ನು ಹಿಡಿದು ತಂದು ನಗರದ ಕಾಟನ್‌ಪೇಟೆಯ ಗೆಸ್ಟ್‌ಹೌಸ್‌ವೊಂದರಲ್ಲಿ ಕೂಡಿಹಾಕಿದ್ದ. ತನ್ನ ಕೆಲಸ ಮುಗಿದ ನಂತರ ಗೂಬೆಯನ್ನು 2.5 ಲಕ್ಷ ರೂ.ಗೆ ಮಾರಲು ಮುಂದಾಗಿದ್ದ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಖಚಿತ ಮಾಹಿತಿಯನ್ನು ಆಧರಿಸಿ ಸಿಐಡಿ ಅರಣ್ಯ ಘಟಕದ ಪೊಲೀಸರು ಕಾರ್ಯಾಚರಣೆ ನಡೆಸಿ ಟೆಕ್ಕಿ ಮತ್ತು ಆತನಿಗೆ ಸಹಕರಿಸಿದ ಮೂವರನ್ನು ಬಂಧಿಸಿದ್ದು, ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.