ರಾಹುಲ್ ಗಾಂಧಿ ಶಿಷ್ಚಾಚಾರ ಉಲ್ಲಂಘಿಸಿದ್ದಾರೆ: ರಾಜನಾಥ್ ಸಿಂಗ್

Update: 2017-08-08 14:55 GMT

ಹೊಸದಿಲ್ಲಿ, ಆ. 8: ಕಳೆದ ವಾರ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ. ಬನಸ್ಕಾಂತದಲ್ಲಿ ನಡೆದ ದಾಳಿಯಲ್ಲಿ ನಮ್ಮ ನಾಯಕನನ್ನು ಹತ್ಯೆ ನಡೆಸುವ ಸಾಧ್ಯತೆ ಇತ್ತು ಎಂದು ವಿರೋಧ ಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
 ರಾಹುಲ್ ಗಾಂಧಿಗೆ ಎಸ್‌ಪಿಜಿ (ವಿಶೇಷ ಭದ್ರತಾ ಪಡೆ) ರಕ್ಷಣೆ ಇದೆ. ಅವರ ಭೇಟಿಯ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿದ್ದರು. ಅಲ್ಲದೆ ಅವರಿಗೆ ಬುಲೆಟ್ ಪ್ರೂಫ್ ಕಾರು ಕೂಡ ಒದಗಿಸಲಾಗಿತ್ತು. ಆದರೆ, ಅವರು ಬುಲೆಟ್ ಪ್ರೂಫ್ ರಹಿತ ಕಾರು ಆಯ್ಕೆ ಮಾಡಿಕೊಂಡರು. ಅವರು ಭದ್ರತಾ ಸಿಬಂದಿ  ಸಲಹೆ ಕೇಳಬೇಕಿತ್ತು. ಆದರೆ, ಅವರು ಕೇಳಲಿಲ್ಲ ಎಂದು ಅವರು ಹೇಳಿದರು.

ಧಾನೇರಾ ಪಟ್ಟಣದಲ್ಲಿ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದರು. ಪೊಲೀಸರು ಒದಗಿಸಿದ ವಾಹನದಲ್ಲಿ ರಾಹುಲ್ ಗಾಂಧಿ ಸಂಚರಿಸಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದರು. ಗುಜರಾತ್‌ನಲ್ಲಿ ಆಗಸ್ಟ್ 4ರಂದು ರಾಹುಲ್ ಗಾಂಧಿ ಮೇಲೆ ನಡೆದ ಸಂಭಾವ್ಯ ಮಾರಕ ದಾಳಿ ಬಗ್ಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ ಬಳಿಕ ಲೋಕಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂತು.
ಕಾಶ್ಮೀರದಲ್ಲಿ ಭಯೋತ್ಪಾದಕರು ಕಲ್ಲು ತೂರಾಟ ನಡೆಸುತ್ತಾರೆ ಎಂದು ಕೇಂದ್ರ ಸರಕಾರ ಹೇಳುತ್ತದೆ, ಗುಜರಾತ್‌ನಲ್ಲಿ ಯಾವ ಭಯೋತ್ಪಾದಕರು ಕಲ್ಲು ತೂರಾಟ ನಡೆಸಿದರು ಎಂದು ಖರ್ಗೆ ಪ್ರಶ್ನಿಸಿದರು.
 
ಕಾಂಗ್ರೆಸ್ ನಾಯಕನ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, ರಾಹುಲ್ ಗಾಂಧಿ 6 ಸಂದರ್ಭ 75 ದಿನಗಳ ಕಾಲ ವಿದೇಶದಲ್ಲಿ ಇದ್ದರು. ಆಗ ಯಾವುದೇ ಭದ್ರತಾ ವ್ಯವಸ್ಥೆಯನ್ನು ಜೊತೆಗೆ ಕೊಂಡೊಯ್ಯದೆ ಅವರು ತಮ್ಮ ಪ್ರಾಣಕ್ಕೆ ಎದುರಾಗಬಹುದಾದ ಬೆದರಿಕೆಯನ್ನು ಎದುರಿಸಿದ್ದಾರೆ ಎಂದರು. ಆರೋಪಿಗಳನ್ನು ಬಂಧಿಸಲಾಗುವುದು ಹಾಗೂ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಹೇಳುತ್ತಿರುವ ನಡುವೆ, ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿದರು. ಗದ್ದಲ ಉಂಟಾದಾಗ ಸ್ಪೀಕರ್ ಸುಮಿತ್ರಾ ಮಹಾಜನ್ ಸದನವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News