ಟ್ರಂಪ್ ಆಡಳಿತದ ವಿರುದ್ಧ ಚಿಕಾಗೊ ನಗರದಿಂದ ಮೊಕದ್ದಮೆ

Update: 2017-08-08 17:38 GMT

ಚಿಕಾಗೊ (ಅಮೆರಿಕ), ಆ. 8: ಸ್ಥಳೀಯ ಜೈಲುಗಳಿಗೆ ಹೋಗಲು ಅಮೆರಿಕದ ವಲಸೆ ಅಧಿಕಾರಿಗಳಿಗೆ ಅನುಮತಿ ನಿರಾಕರಿಸುವ ನಗರಗಳಿಗೆ ನೆರವು ನಿಧಿಯನ್ನು ತಡೆಹಿಡಿಯುವುದರಿಂದ ಟ್ರಂಪ್ ಆಡಳಿತವನ್ನು ನಿರ್ಬಂಧಿಸಬೇಕು ಎಂದು ಕೋರಿ ಚಿಕಾಗೊ ನಗರ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ಹೂಡಿದೆ.

ಸಾಂವಿಧಾನಿಕ ಹಕ್ಕುಗಳು ಮತ್ತು ನಿಧಿ- ಈ ಎರಡರ ಪೈಕಿ ಒಂದನ್ನು ಆರಿಸುವಂತೆ ಟ್ರಂಪ್ ಸರಕಾರದ ನೂತನ ನೀತಿಗಳು ಬಲವಂತಪಡಿಸಿವೆ ಎಂದು ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಮೊಕದ್ದಮೆ ಹೇಳಿದೆ.

ವಲಸೆ ಕಾನೂನು ಉಲ್ಲಂಘನೆ ಆರೋಪವನ್ನು ಎದುರಿಸುತ್ತಿರುವ ಯಾರನ್ನೇ ಆದರೂ ಬಿಡುಗಡೆಗೊಳಿಸುವ 48 ಗಂಟೆಗಳ ಮುನ್ನ ಸ್ಥಳೀಯ ಕಾನೂನು ಅನುಷ್ಠಾನ ಸಂಸ್ಥೆಗಳು ಫೆಡರಲ್ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂಬುದಾಗಿಯೂ ನೂತನ ನೀತಿಗಳು ಹೇಳುತ್ತವೆ.

ಕೆಲವು ನಗರಗಳ ಜೈಲುಗಳಲ್ಲಿರುವ ವಲಸೆ ಉಲ್ಲಂಘಕರನ್ನು ತಪಾಸಣೆ ನಡೆಸಲು ಕೆಲವು ನಗರಗಳು ಫೆಡರಲ್ ಅಧಿಕಾರಿಗಳಿಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಸಂಭವಿಸಿವೆ.

ವಲಸಿಗರ ವಿರುದ್ಧ ಟ್ರಂಪ್ ಸರಕಾರ ಕಠಿಣ ನಿರ್ಬಂಧಗಳನ್ನು ವಿಧಿಸುತ್ತಿರುವುದನ್ನು ಡೆಮಾಕ್ರಟಿಕ್ ಆಡಳಿತದಲ್ಲಿರುವ ಕೆಲವು ನಗರಗಳು ವಿರೋಧಿಸುತ್ತಿವೆ. ಈ ನಗರಗಳಲ್ಲಿರುವ ವಲಸಿಗರ ತಪಾಸಣೆಗೆ ಅವಕಾಶ ನೀಡಬೇಕೆಂದು ಕೇಂದ್ರ ಸರಕಾರದ ಅಧಿಕಾರಿಗಳು ಬಯಸಿದ್ದಾರೆ. ಆದರೆ, ಸಾಂವಿಧಾನಿಕ ಹಕ್ಕನ್ನು ಚಲಾಯಿಸಿರುವ ಹಲವು ನಗರಗಳು ತಪಾಸಣೆಗೆ ಅವಕಾಶ ನಿರಾಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News