×
Ad

ಕಾರ್ಪೊರೇಟ್ ಹಿಡಿತದಲ್ಲಿರುವ ವಿಜ್ಞಾನ-ತಂತ್ರಜ್ಞಾನ ಜನವಿರೋಧಿ ಕಾರ್ಯಕ್ಕೆ ಬಳಕೆ: ನಾಗೇಶ್ ಹೆಗಡೆ ಆಂತಕ

Update: 2017-08-09 17:45 IST

ಬೆಂಗಳೂರು, ಆ.9: ಕಾರ್ಪೊರೇಟ್ ಹಾಗೂ ರಾಜಕೀಯ ಶಕ್ತಿಗಳ ಕಪಿಮುಷ್ಟಿಯಲ್ಲಿ ವಿಜ್ಞಾನ-ತಂತ್ರಜ್ಞಾನ ಸಿಲುಕಿದ್ದು, ಜನವಿರೋಧಿ ಕಾರ್ಯಕ್ಕೆ ಬಳಕೆಯಾಗುತ್ತಿದೆ ಎಂದು ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಬ್ರೇಕ್ ಥ್ರೂ ವಿಜ್ಞಾನ ಸಮಿತಿ ನಗರದ ಟೌನ್‌ಹಾಲ್‌ನಿಂದ ಸೆನೆಟ್ ಸಭಾಂಗಣದವರೆಗೂ ಆಯೋಜಿಸಿದ್ದ ‘ವಿಜ್ಞಾನಕ್ಕಾಗಿ ಭಾರತದ ನಡಿಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೃಜನಶೀಲವಾಗಿ ಬೆಳಗಬೇಕಾಗಿದ್ದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಕಾರ್ಪೊರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕಿ ನಲುಗುತ್ತಿದೆ ಎಂದು ವಿಷಾದಿಸಿದರು.

ಜನರ ಹಿತಕ್ಕೆ ಅನುಗುಣವಾಗಿ ವಿಜ್ಞಾನ-ತಂತ್ರಜ್ಞಾನ ಬಳಕೆಯಾಗಬೇಕಾಗಿತ್ತು. ಆದರೆ, ಇವತ್ತಿನ ತಂತ್ರಜ್ಞಾನದ ಆವಿಷ್ಕಾರಗಳು ಜನತೆಯನ್ನು ಮತ್ತಷ್ಟು ಪರಾವಲಂಬಿಗಳನ್ನಾಗಿಸುತ್ತಿದೆ. ವಿಜ್ಞಾನ-ತಂತ್ರಜ್ಞಾನ ಇಲ್ಲದ ಕಾಲದಲ್ಲಿ ನಮ್ಮ ಜನತೆ ಕೃಷಿ ಬದುಕಿನಲ್ಲಿ ಸ್ವಾಭಿಮಾನಿಯಾಗಿದ್ದರು. ಆದರೆ, ಇವತ್ತಿನ ವಿಜ್ಞಾನ ರೈತರಲ್ಲಿದ್ದ ಬಿತ್ತನೆ ಬೀಜ, ಗೊಬ್ಬರಗಳನ್ನು ಕಸಿದುಕೊಂಡು ಗುಲಾಮರನ್ನಾಗಿಸಿಕೊಳ್ಳುತ್ತಿದೆ ಎಂದು ಅವರು ಆಪಾದಿಸಿದರು. ಕಾರ್ಪೊರೇಟ್ ಕಂಪೆನಿಗಳು ಹಾಗೂ ನಮ್ಮ ಸರಕಾರದ ಸ್ವಾರ್ಥ ಹಿತಾಸಕ್ತಿಗಳು ದೇಶದ ರೈತ, ಕಾರ್ಮಿಕ ಹಾಗೂ ಜನಸಾಮಾನ್ಯರ ಬದುಕಿಗೆ ಏನು ಅಗತ್ಯವಿದೆ ಎಂಬುದನ್ನು ಎಂದಿಗೂ ಪರಿಗಣಿಸಿಲ್ಲ. ಅದರ ಬದಲಾಗಿ, ತಮ್ಮ ಲಾಭಕ್ಕಾಗಿ ದೇಶದ ಜನತೆಯನ್ನು ಹಲವು ರೀತಿಯಲ್ಲಿ ನಂಬಿಸಿ ಗುಲಾಮರನ್ನಾಗಿಸಿಕೊಂಡರು. ಅದರ ಫಲವಾಗಿ ಇವತ್ತು ರೈತರು ಬೀಜಕ್ಕಾಗಿ, ರಾಸಾಯನಿಕ ಗೊಬ್ಬರಕ್ಕಾಗಿ, ನೀರಿಗಾಗಿ ಸೇರಿದಂತೆ ಎಲ್ಲದಕ್ಕೂ ಕಾರ್ಪೊರೇಟ್ ಕಂಪೆನಿಗಳನ್ನು ಅವಲಂಬಿಸಬೇಕಾಗಿದೆ ಎಂದು ನಾಗೇಶ್ ಹೆಗಡೆ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಮಾತನಾಡಿ, ಸಮಾಜದ ಬೆಳವಣಿಗೆಯ ಮೂಲ ತಳಹದಿ ವಿಜ್ಞಾನ-ತಂತ್ರಜ್ಞಾನದಲ್ಲಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವೌಢ್ಯಾಚರಣೆಯನ್ನು ಬಿತ್ತುವ ಮೂಲಕ ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪದಂತೆ ತಡೆಯುತ್ತಿವೆ. ಈ ವೌಢ್ಯಾಚರಣೆಯನ್ನು ಮೀರಿ ವಿಜ್ಞಾನವನ್ನು ಬೆಳೆಸುವುದಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

ಜನತೆಗೆ ಬಹುಬೇಗ ಸಿನಿಮಾ ನಟರ, ಸಂಗೀತಗಾರರ, ಸಾಹಿತಿಗಳ ಹೆಸರು ಗೊತ್ತಾಗುತ್ತದೆ. ಮಾಧ್ಯಮಗಳಲ್ಲಿ ಇವರ ಬಗ್ಗೆ ದಿನಪ್ರತಿ ವರದಿಗಳು ಪ್ರಕಟವಾಗುತ್ತಿರುತ್ತವೆ. ಆದರೆ, ತಮ್ಮ ಇಡೀ ಬದುಕನ್ನು ಸಮಾಜಕ್ಕಾಗಿ ಮೀಸಲಿಟ್ಟ ವಿಜ್ಞಾನಿಗಳ ಹೆಸರು ಯಾರಿಗೂ ಗೊತ್ತಿರುವುದಿಲ್ಲ. ಹೀಗಾಗಿ ವಿಜ್ಞಾನಿ ಹಾಗೂ ವಿಜ್ಞಾನದ ವಿಷಯದ ಕುರಿತು ಜನಸಾಮಾನ್ಯರಿಗೆ ಕುತೂಹಲವೇ ಇಲ್ಲವಾಗಿದೆ ಎಂದು ಅವರು ವಿಷಾದಿಸಿದರು. ವಿಜ್ಞಾನ ಜನಸಾಮಾನ್ಯರಿಗೆ ತಲುಪಬೇಕಾದರೆ ವಿಜ್ಞಾನ-ವಿಜ್ಞಾನಿಗಳ ಕುರಿತು ಸಾರ್ವಜನಿಕವಾಗಿ ಚರ್ಚೆಗಳಾಗಬೇಕು. ಜನಸಾಮಾನ್ಯರು ಸಹ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆಂದು ತಿಳಿಸಿಕೊಡಬೇಕಾಗಿದೆ. ವಿಜ್ಞಾನದ ವಿಷಯದ ಕುರಿತು ಸಾರ್ವಜನಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ವಿಜ್ಞಾನಿಗಳಾದ ಯು.ಆರ್.ರಾವ್, ಪ್ರೊ.ಯಶ್‌ಪಾಲ್ ಹಾಗೂ ಪ್ರೊ.ಪಿ.ಎಂ.ಭಾರ್ಗವ್‌ರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ವೇಳೆ ಬ್ರೇಕ್ ಥ್ರೂ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ಎಸ್.ರಜಿನಿ ಮತ್ತಿತರರಿದ್ದರು.

ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗೆ ಮಾರಕವಾಗಿರುವ ವೌಢ್ಯಾಚರಣೆಯನ್ನು ತಡೆಯುವುದು ಪ್ರಜ್ಞಾವಂತರ ಕರ್ತವ್ಯ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ವೌಢ್ಯಾಚರಣೆ ನಿಷೇಧ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡಲು ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಶೀಘ್ರವಾಗಿ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ವೈಜ್ಞಾನಿಕ ಬೆಳವಣಿಗೆಗೆ ಕರ್ನಾಟಕ ದೇಶಕ್ಕೆ ಮಾದರಿಯಾಗಲಿ.
-ಪ್ರೊ.ಜಾಫೆಟ್ ಉಪಕುಲಪತಿ, ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News