ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಜಿಡಿಪಿ ಶೇ.3ರಷ್ಟು ಹೆಚ್ಚಳಕ್ಕೆ ವಿಜ್ಞಾನಿಗಳ ಒತ್ತಾಯ
ಬೆಂಗಳೂರು, ಆ.9: ಕೇಂದ್ರ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ವಿಜ್ಞಾನ-ತಂತ್ರಜ್ಞಾನ ಹಾಗೂ ಸಂಶೋಧನೆಗೆ ಜಿಡಿಪಿಯಲ್ಲಿ ಶೇ.3ರಷ್ಟು ಮೀಸಲಿಡಬೇಕು ಎಂದು ಒತ್ತಾಯಿಸಿ ಹಿರಿಯ ವಿಜ್ಞಾನಿಗಳು ನಗರದಲ್ಲಿ ‘ವಿಜ್ಞಾನಕ್ಕಾಗಿ ಭಾರತದ ನಡಿಗೆ’ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಣದ ಕ್ಷೇತ್ರದಲ್ಲಿ ವೈದಿಕಶಾಹಿ ಹಾಗೂ ಅವೈಜ್ಞಾನಿಕ ಚಿಂತನೆಗಳನ್ನು ಬಿತ್ತುವಲ್ಲಿ ನಿರತವಾಗಿದೆ. ಇದರಿಂದ ಶಿಕ್ಷಣ ಕ್ಷೇತ್ರ ತೀರ ಆತಂಕ ಸ್ಥಿತಿಯನ್ನು ತಲುಪಿದೆ ಎಂದು ಆರೋಪಿಸಿ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬ್ರೇಕ್ ಥ್ರೂ ವತಿಯಿಂದ ದೇಶದ 40ನಗರಗಳಲ್ಲಿ ವಿಜ್ಞಾನಕ್ಕಾಗಿ ಭಾರತ ನಡಿಗೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ನಗರದಲ್ಲಿ ಪುರಭವನದಿಂದ ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದವರೆಗೆ ಹಮ್ಮಿಕೊಂಡಿದ್ದ ವಿಜ್ಞಾನಕ್ಕಾಗಿ ಭಾರತದ ನಡಿಗೆಯಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದ ಎಂಬಿಜಿ ಅಧ್ಯಕ್ಷ ಪ್ರೊ.ದೀಪಾಂಕರ್ ಚಟ್ಟಾರ್ಜಿ, ಸೆಂಟರ್ ಆಫ್ ಎಕೊಲಾಜಿಕಲ್ ಸೈನ್ಸ್‌ನ ಪ್ರೊ.ಟಿ.ವಿ.ರಾಮಚಂದ್ರ, ಸೆಂಟ್ ಜೋಸೆಫ್ ರಿಸರ್ಚ್ ಸೆಂಟರ್‌ನ ನಿರ್ದೇಶಕ ರಿಚರ್ಡ್ ರೇಗೊ, ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವೇಳೆ ಜೆಎನ್‌ಯು ಪ್ರೊ.ದೀಪಾಂಕರ್ ಮಾತನಾಡಿ, ಹಲವು ಸಂದರ್ಭಗಳಲ್ಲಿ ವೈಜ್ಞಾನಿಕ ಅರಿವಿನ ಕೊರತೆಯಿಂದಾಗಿ ಸಾವು ನೋವುಗಳು ಸಂಭವಿಸುತ್ತಿವೆ. ವಿಜ್ಞಾನ ಇಲ್ಲದ ಜಾಗದಲ್ಲಿ ವೌಢ್ಯಾಚರಣೆ ವಿಜೃಂಭಿಸಿ ಅನಾಚಾರಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ದೇಶದ ಜನಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರು ವಿಜ್ಞಾನದ ಮಹತ್ವವನ್ನು ಅರಿಯಬೇಕಾಗಿದೆ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ವಿಜ್ಞಾನವಿಲ್ಲದೆ ಬದುಕಲಿಕ್ಕೆ ಸಾಧ್ಯವೇ ಇಲ್ಲದ ಮಟ್ಟಕ್ಕೆ ಜಗತ್ತು ನಿರ್ಮಾಣಗೊಳ್ಳುತ್ತಿದೆ. ವಿಶ್ವದ ಇತರೆ ದೇಶಗಳು ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚಿನ ಅನುದಾನ ಕೊಡುತ್ತಿದೆ. ಆದರೆ, ಕೇಂದ್ರ ಸರಕಾರ ವಿಜ್ಞಾನ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿರುವುದು ಆತಂಕ ಮೂಡಿಸಿದೆ ಎಂದು ವಿಷಾದಿಸಿದರು.
ದೇಶದಲ್ಲಿ ವಿಜ್ಞಾನ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ಪಕ್ಷಭೇದ ಮಾಡಬಾರದು. ಯಾವುದೇ ರಾಜಕೀಯ ಪಕ್ಷವಾಗಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಈ ಹಿನ್ನೆಲೆಯಲ್ಲಿ ಜಿಡಿಪಿ ಶೇ.3ರಷ್ಟನ್ನು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಮೀಸಲಿಡಬೇಕು. ಆಗ ಭಾರತ ಇತರೆ ಅಭಿವೃದ್ಧಿ ದೇಶಗಳೊಂದಿಗೆ ಸಮರ್ಥವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಹಿರಿಯ ವಿಜ್ಞಾನಿಗಳಾದ ಪ್ರೊ.ಟಿ.ವಿ.ರಾಮಚಂದ್ರ, ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ಉಮಾ, ಪ್ರೊ.ಸರ್ಬರಿ ಭಟ್ಟಾಚಾರ್ಯ, ಪ್ಲಾಸ್ಟಿಕ್ ಸರ್ಜನ್ ಡಾ.ಸುಧಾ, ಬ್ರೇಕ್ ಥ್ರೂ ವಿಜ್ಞಾನ ಸಮಿತಿ ನಗರ ಕಾರ್ಯದರ್ಶಿ ನಿರಂಜನ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಸಮಾಜದಲ್ಲಿ ವಿಜ್ಞಾನವನ್ನು ಬದಿಗೊತ್ತಿ ಮೂಢನಂಬಿಕೆಯನ್ನು ಬೆಳೆಸುವ ಪ್ರವೃತ್ತಿ ಹೆಚ್ಚುತ್ತಿದೆ. ಇತಿಹಾಸದಲ್ಲಿ ಸರ್ವಾಧಿಕಾರಿ ಹಿಟ್ಲರ್ ಧರ್ಮದ ಹೆಸರಿನಲ್ಲಿ ಜನರನ್ನು ಕಗ್ಗೊಲೆ ಮಾಡಿದಂತೆ ಈಗ ‘ಗೋ ಮಾತೆ’ ಹೆಸರಿನಲ್ಲಿ ಕಗ್ಗೊಲೆಗಳು ನಡೆಯುತ್ತಿರುವುದು ಖಂಡನೀಯ.
-ಪ್ರೊ.ರವಿವರ್ಮಕುಮಾರ್, ಮಾಜಿ ಅಡ್ವೋಕೇಟ್ ಜನರಲ್
ಹಕ್ಕೊತ್ತಾಯಗಳು
-ವೈಜ್ಞಾನಿಕ ಮತ್ತು ತಂತ್ರಜ್ಞಾನಿಕ ಸಂಶೋಧನೆಗೆ ದೇಶದ ಜಿಡಿಪಿಯ ಕನಿಷ್ಠ ಶೇ.3 ಮತ್ತು ಶಿಕ್ಷಣಕ್ಕೆ ಕನಿಷ್ಠ ಶೇ.10ಮೀಸಲಿಡಬೇಕು.
-ಭಾರತದ ಸಂವಿಧಾನದ ಆಶಯದಂತೆ ವೆಜ್ಞಾನಿಕ ಮನೋಭಾವ, ಮಾನವೀಯ ಮೌಲ್ಯಗಳು, ಸತ್ಯಶೋಧಕ ಮನಸನ್ನು ಬೆಳೆಸುವುದಕ್ಕೆ ಹೆಚ್ಚಿನ ಆದ್ಯತೆ.
-ಶಿಕ್ಷಣ ವ್ಯವಸ್ಥೆಯ ಕೇವಲ ವೈಜ್ಞಾನಿಕ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ವಿಚಾರಗಳನ್ನು ಮಾತ್ರ ಕಲಿಸಬೇಕು.
-ಸಾಕ್ಷ್ಯಾಧಾರಿತ ವಿಜ್ಞಾನದ ಆಧಾರದ ಮೇಲೆ ನೀತಿಗಳನ್ನು ಜಾರಿಗೊಳಿಸಬೇಕು.