ಭ್ರಷ್ಟಾಚಾರದಲ್ಲಿ ಮಿಂದೇಳುತ್ತಿರುವ ರಾಜಕೀಯ ಪಕ್ಷಗಳು: ದೊರೆಸ್ವಾಮಿ ಕಳವಳ
ಬೆಂಗಳೂರು, ಆ. 9: ಎಲ್ಲಾ ರಾಜಕೀಯ ಪಕ್ಷಗಳು ಇಂದು ಭ್ರಷ್ಟಾಚಾರವೆಂಬ ಕೊಳಚೆಯಲ್ಲಿ ಬಿದ್ದು ಹೊರಳಾಡಿ ಮಿಂದೇಳುತ್ತಿವೆ ಎಂದು ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಬುಧವಾರ ಕಸಾಪದಲ್ಲಿ ಜನತಾ ರಂಗ ಆಯೋಜಿಸಿದ್ದ 76ನೆ ಕ್ವಿಟ್ ಇಂಡಿಯಾ ಸ್ಮರಣಾರ್ಥ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರಕ್ಕಾಗಿ ಹಿರಿಯರು ಮಾಡಿರುವ ತ್ಯಾಗ ಬಲಿದಾನಗಳಿಗೆ ಇಂದು ಬೆಲೆಯೇ ಇಲ್ಲದಂತಾಗಿದೆ. ರಾಜಕಾರಣಿಗಳು ತಮ್ಮ ಆಸ್ತಿಗಳನ್ನು ದ್ವಿಗುಣ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವಾತಂತ್ರ ಬಂದು 70 ವರ್ಷಗಳೇ ಆದರೂ ದೇಶದಲ್ಲಿ ಇನ್ನೂ ಬಡತನ ನಿರ್ಮೂಲನೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ರಾಷ್ಟ್ರದಲ್ಲಿ ಸರ್ವಾಧಿಕಾರ ಆಡಳಿತದ ಚಿತ್ರಣ ಗೋಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಳಿಸಿ ಹಾಕಿ, ಇನ್ನುಳಿದ ಪಕ್ಷಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಎಲ್ಲಾ ಕಾರಣಗಳಿಗೂ ಮತದಾರರಲ್ಲಿನ ನಿರ್ಲಕ್ಷವೇ ಕಾರಣ. ಅರ್ಹ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪದೇ ಪದೇ ವಿಫಲವಾಗುತ್ತಿದ್ದೇವೆ. ಅಭ್ಯರ್ಥಿಯ ಪೂರ್ವಾಪರ ತಿಳಿಯದೇ ಮತ ಹಾಕಿರುವುದರಿಂದ ಇಂತಹ ಪರಿಸ್ಥಿತಿ ಎದುರಿಸಬೇಕಾಗಿದೆ. ದೇಶ ಶಾಂತಿ, ನೆಮ್ಮದಿ, ಅಭಿವೃದ್ಧಿ ಕಂಡುಕೊಳ್ಳಬೇಕಾದರೆ ಮುಂದಿನ ಚುನಾವಣೆಗಳಲ್ಲಿ ಮತದಾರರು ಜಾಗೃತರಾಗಬೇಕಿದೆ ಎಂದು ಕರೆಕೊಟ್ಟರು.
ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ನಾವು ಇನ್ನೂ ಬೇರೆಯವರಲ್ಲಿನ ದೋಷಗಳನ್ನು ಗುರುತಿಸಿ ಟೀಕೆ ಮಾಡುವದರಲ್ಲಿ ಇದ್ದೇವೆ. ಇದು ಬದಲಾಗಬೇಕು. ಮೊದಲು ನಾವು ನಮ್ಮಲ್ಲಿನ ದೃಷ್ಟಿಕೋನ ಬದಲಾದಾಗ ಮಾತ್ರ ದೇಶದ ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಲೋಕಸಭಾ ಸದಸ್ಯ ಕೋದಂಡರಾಮಯ್ಯ, ಸಾಮಾಜಿಕ ಹೋರಾಟಗಾರರದ ರಾಬಿನ್ ಮ್ಯಾಥ್ಯು, ಸಿ.ಕೆ.ರವಿಚಂದ್ರ, ರಾಮಲಿಂಗ ರೆಡ್ಡಿ, ಸರದಾರ್ ಅಹಮ್ಮದ್ ಖುರೇಶಿ ಸೇರಿದಂತೆ ಇತರರು ಇದ್ದರು.