×
Ad

ಬ್ಯಾಂಕ್‌ನಲ್ಲಿ ಕನ್ನಡ ಕಡ್ಡಾಯವಾಗಲಿ: ನಾರಾಯಣಗೌಡ

Update: 2017-08-09 18:00 IST

ಬೆಂಗಳೂರು, ಆ.9: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ನ ಶಾಖೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.

ಬುಧವಾರ ನಗರದ ಎಂಜಿ ರಸ್ತೆಯ ಚರ್ಚ್‌ಸ್ಟ್ರೀಟ್‌ನಲ್ಲಿರುವ ಎಸ್‌ಬಿಐ ಪ್ರಧಾನ ಕಚೇರಿ ಮುಂಭಾಗ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಸ್‌ಬಿಐನ ಕರ್ನಾಟಕ ಶಾಖೆಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ಸೇವೆ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಾರಾಯಣಗೌಡ, ಎಸ್‌ಬಿಐನಲ್ಲಿ ಇಂಗ್ಲಿಷ್ ಮತ್ತು ಹಿಂದಿಯ ನಾಮಫಲಕ, ಸೂಚನೆಗಳು, ಪ್ರಕಟಣೆಗಳು, ಅರ್ಜಿ ನಮೂನೆಗಳಿವೆ. ಕನ್ನಡದಲ್ಲಿ ಯಾವ ವ್ಯವಹಾರವೂ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚೆಕ್ ಪುಸ್ತಕಗಳಲ್ಲೂ ಇಂಗ್ಲಿಷ್, ಹಿಂದಿ ಭಾಷೆಯಿದ್ದು, ನೇಮಕಾತಿಯಲ್ಲೂ ಕೂಡ ಕನ್ನಡಿಗರನ್ನು ಪರಿಗಣಿಸದೆ ಉತ್ತರ ಭಾರತೀಯರನ್ನೆ ನೇಮಿಸಿಕೊಳ್ಳಲಾಗುತ್ತಿದೆ. ಅಲ್ಲಿನ ಉತ್ತರ ಭಾರತೀಯ ನೌಕರರು ಕನ್ನಡ ಗ್ರಾಹಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದ ಅವರು, ಕನ್ನಡ ನಾಡಿನಲ್ಲಿ ವ್ಯವಹರಿಸುವ ಎಸ್‌ಬಿಐ ಅಧಿಕಾರಿಗಳು ಕೂಡಲೇ ಕನ್ನಡ ವಿರೋಧಿ ಧೋರಣೆಯನ್ನು ನಿಲ್ಲಿಸಿ ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಹಂತ ಹಂತದ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಮನವಿ ಪತ್ರ: ಎಸ್‌ಬಿಐನ ಪ್ರತಿ ಶಾಖೆಗಳಲ್ಲಿ ಕನ್ನಡದ ಬಳಕೆ ಸರಿಯಾಗಿ ಆಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಬೇಕು. ಅದೇ ರೀತಿ, ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಕನ್ನಡದಲ್ಲೂ ಕೊಡಬೇಕು. ಅದೇ ರೀತಿ, ಕನ್ನಡ ಸೇವೆ ಒದಗಿಸಬೇಕೆಂದು ಒತ್ತಾಯಿಸಿ ಕರವೇ ಅಧ್ಯಕ್ಷ ನಾರಾಯಣಗೌಡ, ಎಸ್‌ಬಿಐ ಕರ್ನಾಟಕ ವಿಭಾಗದ ವ್ಯವಸ್ಥಾಕರಿಗೆ ಮನವಿ ಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News