×
Ad

'ಕೋಮುವಾದ ಕ್ವಿಟ್ ಇಂಡಿಯಾ' ಚಳವಳಿಯ ಅಗತ್ಯವಿದೆ: ಜಿ.ಎನ್.ನಾಗರಾಜ್

Update: 2017-08-09 19:27 IST

ಬೆಂಗಳೂರು, ಆ.9: ಕೋಮುವಾದ, ಭ್ರಷ್ಟಾಚಾರ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳನ್ನು ದೇಶದಿಂದ ಹೊರದೂಡಲು ಮತ್ತೊಂದು ಕ್ವಿಟ್ ಇಂಡಿಯಾ ಚಳವಳಿ ಆಗಬೇಕಾಗಿದೆ ಎಂದು ಸಿಪಿಎಂ ಕಾರ್ಯದರ್ಶಿ ಮಂಡಳಿಯ ಸದಸ್ಯ ಜಿ.ಎನ್.ನಾಗರಾಜ್ ತಿಳಿಸಿದ್ದಾರೆ.

ಬುಧವಾರ ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷದ ಸ್ಮರಣಾರ್ಥವಾಗಿ ಸಿಪಿಎಂ ವತಿಯಿಂದ ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರಕ್ಕಾಗಿ ಲಕ್ಷಾಂತರ ಯುವ ಜನತೆ ತಮ್ಮ ಜೀವನವನ್ನೇ ಬಲಿಕೊಟ್ಟರು. ಆ ಸ್ವಾತಂತ್ರವನ್ನು ಈಗಿನ ಜನಪ್ರತಿನಿಧಿಗಳು ಹಾಳು ಮಾಡುತ್ತಿದ್ದಾರ ಎಂದು ಕಿಡಿಕಾರಿದರು.

ಭಾರತವನ್ನು ಬ್ರಿಟಿಷರು ಸುಮಾರು 300ಕ್ಕೂ ಹೆಚ್ಚು ಕಾಲ ಆಳ್ವಿಕೆ ಮಾಡಿದರು. ಆ ಸಂದರ್ಭದಲ್ಲಿ ದೇಶದ ಜನತೆಯನ್ನು ಗುಲಾಮರನ್ನಾಗಿಸಿಕೊಂಡ ಬ್ರಿಟಿಷರು ಇಲ್ಲಿನ ಸಂಪತ್ತನ್ನು ಲೂಟಿ ಮಾಡಿದರು. ಅವರನ್ನು ದೇಶದಿಂದ ಹೊರಗಟ್ಟಲು ಸ್ವಾತಂತ್ರ ಸೇನಾನಿಗಳು ಅಪಾರ ತ್ಯಾಗ ಮಾಡಿದರು. ಈಗ ಬ್ರಿಟಿಷರ ಸ್ಥಾನದಲ್ಲಿ ಕಾರ್ಪೊರೇಟ್ ಕಂಪೆನಿಗಳು ಸ್ಥಾಪನೆಗೊಂಡಿದ್ದು, ದೇಶದ ಸಂಪತ್ತನ್ನು ಲೂಟಿ ಮಾಡುತ್ತಿವೆ ಎಂದು ಅವರು ವಿಷಾದಿಸಿದರು.

ಕೋಮುವಾದ ಹಾಗೂ ಬಂಡವಾಳವಾದಗಳು ಒಂದು ನಾಣ್ಯದ ಎರಡು ಮುಖಗಳಾಗಿವೆ. ಕೋಮುವಾದ ದೇಶಭಕ್ತಿಯ ಹೆಸರಿನಲ್ಲಿ ದೇಶದಲ್ಲಿ ಅಸಹಿಷ್ಣುತೆಯನ್ನು ಹರಡುತ್ತಿದೆ. ಗೋ ಮಾತೆಯ ಹೆಸರಿನಲ್ಲಿ ರಕ್ತಪಾತವನ್ನು ಹರಿಸುತ್ತಿದೆ. ಕೋಮುವಾದಿಗಳ ಈ ಪ್ರಾಬಲ್ಯಕ್ಕೆ ಬಂಡವಾಳಶಾಹಿಗಳ ಆರ್ಥಿಕ ನೆರವು ಕಾರಣವಾಗಿದೆ ಎಂದು ಅವರು ಆಪಾದಿಸಿದರು. ಇನ್ನು ಬಂಡವಾಳಶಾಹಿಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ದೇಶದಲ್ಲಿರುವ ಕೋಮುವಾದಿ ಸರಕಾರಗಳು ಲಕ್ಷಾಂತರ ಎಕರೆಗಳನ್ನು ರಿಯಾಯಿತಿ ದರದಲ್ಲಿ ನೀಡಿ, ಅವರಿಗೆ ಪೂರಕವಾದ ಕಾನೂನುಗಳನ್ನು ಜಾರಿ ಮಾಡುತ್ತಿವೆ. ಈಗಾಗಲೆ ದೇಶದ ಬಹುತೇಕ ಸಂಪತ್ತು ಬಂಡವಾಳಶಾಹಿಗಳ ವಶವಾಗಿದೆ. ಈ ಸಂಪತ್ತನ್ನು ಪುನಃ ಜನವರ್ಗಕ್ಕೆ ಪಡೆಯಬೇಕಾದರೆ ದೇಶದಲ್ಲಿ ಮತ್ತೊಂದು ಕ್ವಿಟ್ ಇಂಡಿಯಾ ಚಳವಳಿ ಆಗಬೇಕಾಗಿದೆ ಎಂದು ಅವರು ಹೇಳಿದರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬೆಂಗಳೂರು ನಗರ ಬಹುದೊಡ್ಡ ಪಾತ್ರವಹಿಸಿತ್ತು. ಸುಮಾರು 6-7ತಿಂಗಳು ಬೆಂಗಳೂರು ನಗರ ರಣರಂಗವಾಗಿತ್ತು. ಕ್ವಿಟ್ ಇಂಡಿಯಾ ಹೋರಾಟದಲ್ಲಿ ಸುಮಾರು 150ಮಂದಿಯ ಬಲಿದಾನವಾಗಿತ್ತು. ಅದರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಜೊತೆ ಕಾರ್ಮಿಕರು ಹಾಗೂ ನಗರದ ಜನತೆ ಸಕ್ರಿಯವಾಗಿ ಭಾಗವಹಿಸಿದ್ದರು.
-ಜಿ.ಎನ್.ನಾಗರಾಜ್, ಕಾರ್ಯದರ್ಶಿ ಮಂಡಳಿ ಸದಸ್ಯ, ಸಿಪಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News