×
Ad

ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ: ಡಿ.ಕೆ.ಶಿವಕುಮಾರ್

Update: 2017-08-09 19:35 IST

ಬೆಂಗಳೂರು, ಆ.9: ಗುಜರಾತ್ ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ಪಟೇಲ್ ಗೆಲುವು ಸಾಧಿಸಿರುವುದಕ್ಕೆ ನನಗೆ ಶ್ರೇಯ ನೀಡಬೇಡಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸ ‘ಕೆಂಕೇರಿ’ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹ್ಮದ್‌ಪಟೇಲ್‌ರನ್ನು ಚುನಾವಣೆಯಲ್ಲಿ ನಾನು ಗೆಲ್ಲಿಸಲಿಲ್ಲ. ಪಕ್ಷ ನನಗೆ ನೀಡಿದ್ದ ಜವಾಬ್ದಾರಿಯನ್ನಷ್ಟೇ ನಿರ್ವಹಿಸಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲು ಅಗತ್ಯವಿರುವಷ್ಟು ಸಂಖ್ಯಾಬಲವಿದ್ದರೂ ಗುಜರಾತ್‌ನ ಆಡಳಿತರೂಢ ಬಿಜೆಪಿ ಆಪರೇಷನ್ ಕಮಲ ಮಾಡಿದ ವಿಚಾರ ಎಲ್ಲರಿಗೂ ಗೊತ್ತಿದೆ. ರಾಜ್ಯಸಭೆಯ ಚುನಾವಣೆ ಯಾವ ರೀತಿ ನಡೆಯಿತು ಎಂಬುದನ್ನು ಇಡೀ ದೇಶವೆ ನೋಡಿದೆ. ಶತಾಯಗತಾಯ ಅಹ್ಮದ್‌ಪಟೇಲ್‌ರನ್ನು ಸೋಲಿಸಬೇಕೆಂಬ ಬಿಜೆಪಿ ಕನಸು ನನಸಾಗಲಿಲ್ಲ ಎಂದು ಶಿವಕುಮಾರ್ ಹೇಳಿದರು.

ಗುಜರಾತ್‌ನ ಶಾಸಕರನ್ನು ಅನಿವಾರ್ಯವಾಗಿ ರಾಜ್ಯಕ್ಕೆ ಕರೆ ತರಲಾಯಿತು. ನಮ್ಮ ಮೇಲೆ ವಿಶ್ವಾಸವಿಟ್ಟು ಕೇಂದ್ರದ ನಾಯಕರು ಶಾಸಕರನ್ನು ಕಳುಹಿಸಿಕೊಟ್ಟಿದ್ದರು. ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಅಹ್ಮದ್‌ಪಟೇಲ್ ಗೆಲುವಿನಲ್ಲಿ ನಮ್ಮದು ಸಣ್ಣ ಅಳಿಲು ಸೇವೆ ಅಷ್ಟೇ ಎಂದು ಅವರು ತಿಳಿಸಿದರು.

ಕಷ್ಟಗಳು, ಅಡೆತಡೆಗಳು ಬಂದರೂ ಅದನ್ನು ನಿಭಾಯಿಸಿದ್ದೇವೆ. ಅದರ ಪ್ರತಿಫಲ ಸಿಕ್ಕಿರುವುದು ಸಂತಸ ತಂದಿದೆ. ಈ ಹಿಂದೆ ಒಮ್ಮೆ ಪಿಜಿಆರ್ ಸಿಂಧ್ಯಾ ವಿರುದ್ಧ ನಾನು ಸ್ಪರ್ಧಿಸಿದಾಗ ಚುನಾವಣಾ ಆಯೋಗವು ನನ್ನ ಮತವನ್ನೆ ಅಸಿಂಧುಗೊಳಿಸಿತ್ತು ಎಂಬುದನ್ನು ಸ್ಮರಿಸಿಕೊಂಡ ಅವರು, ಇಡೀ ದೇಶವೆ ಮೆಚ್ಚುವಂತೆ ಕೇಂದ್ರ ಚುನಾವಣಾ ಆಯೋಗ ಕೈಗೊಂಡ ಕ್ರಮ ಸ್ವಾಗತಾರ್ಹ ಎಂದರು.

ಚುನಾಯಿತ ಪ್ರತಿನಿಧಿಗಳು ಯಾವ ರೀತಿ ಮತದಾನ ಮಾಡಬೇಕು, ಮತದ ಗೌಪ್ಯತೆ, ಪಾವಿತ್ರತೆ ಹೇಗೆ ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗವು ಎಲ್ಲ ಪಕ್ಷಗಳಿಗೂ ತಕ್ಕ ಪಾಠ ಕಲಿಸಿದೆ. ರಾಜ್ಯದ ಪರವಾಗಿ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ ರಾಜಕೀಯ ಸ್ಥಾನಮಾನವನ್ನು ಯಾರಿಗೆ ಯಾವಾಗ ಸಿಗುತ್ತದೆ ಎಂಬುದನ್ನು ಕಾಲವೇ ನಿರ್ಣಯಿಸಲಿದೆ. ನಾನು ಗೃಹ ಖಾತೆಯ ಅಪೇಕ್ಷೆಯನ್ನು ಇಟ್ಟುಕೊಂಡಿಲ್ಲ. ಸದ್ಯ ನನಗೆ ನೀಡಿರುವ ಇಲಾಖೆಯಲ್ಲಿ ಸಮರ್ಥವಾಗಿ ಕೆಲಸ ಮಾಡಿ ರೈತರು ಹಾಗೂ ಜನಸಾಮಾನ್ಯರಿಗೆ ವಿದ್ಯುತ್ ಸರಬರಾಜು ಮಾಡಿದರೆ ಅಷ್ಟೇ ಸಾಕು ಎಂದು ಅವರು ತಿಳಿಸಿದರು.

ಡಿಕೆಶಿಗೆ ಸೋನಿಯಾ ಧನ್ಯವಾದ
ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್‌ಪಟೇಲ್ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ದೂರವಾಣಿ ಕರೆ ಮಾಡಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಪಕ್ಷಕ್ಕೆ ನೆರವು ನೀಡಲು ಹೋಗಿ ದೊಡ್ಡ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿದ್ದೀರಾ. ನಿಮ್ಮ ಸೇವೆಯನ್ನು ಸದಾಕಾಲಕ್ಕೆ ಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News