ಸುದ್ದಿಮಾಧ್ಯಮಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು: ಎಚ್.ಆಂಜನೇಯ
ಬೆಂಗಳೂರು, ಆ.10: ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಬಹಿರಂಗ ಹರಾಜು ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೂಲೆ ಮಾಡುವ ಕುತಂತ್ರ ನಡೆಸಿದರೂ, ಸುದ್ದಿಮಾಧ್ಯಮಗಳು ಸತ್ಯವನ್ನು ಬರೆಯಲಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಬೇಸರ ವ್ಯಕ್ತಪಡಿಸಿದರು.
ಗುರುವಾರ ನಗರದ ನಯನ ಸಭಾಂಗಣದಲ್ಲಿ ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರ 126ನೆ ವರ್ಷಾಚರಣೆ, ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿಗೆ ನಡೆದ ಗುಜರಾತ್‌ನ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಹಮದ್ ಪಟೇಲ್‌ರನ್ನು ಸೋಲಿಸುವ ಸಲುವಾಗಿ ಬಿಜೆಪಿ ನಾಯಕರು ಕಾಂಗ್ರೆಸ್‌ನ ಶಾಸಕರನ್ನು ಪ್ರಾಣಿ-ಪಕ್ಷಿಗಳಿಗಿಂತ ಹೀನಾಯವಾಗಿ ಹರಾಜು ಹಾಕಲು ಮುಂದಾಗಿದ್ದರು. ಇದು ಪ್ರಜಾಪ್ರಭುತ್ವದ ಕಗ್ಗೂಲೆ ಎಂದು ತಿಳಿದಿದ್ದರೂ ಯಾವುದೇ ದೃಶ್ಯ ಮಾಧ್ಯಮ ಸುದೀರ್ಘ ಸುದ್ದಿಯನ್ನು ಪ್ರಕಟಿಸಲಿಲ್ಲ. ಮುದ್ರಣ ಮಾಧ್ಯಮಗಳ ಯಾವುದೇ ಸಂಪಾದಕೀಯಗಳು ಈ ಕುರಿತು ಮಾತನಾಡಲಿಲ್ಲ ಎಂದರು.
ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವವನ್ನು ರಕ್ಷಿಸುವ, ಸಂವಿಧಾನದ ಆಶಯಗಳು ಹಾಗೂ ವೌಲ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸತ್ಯವನ್ನು ಮರೆಮಾಚದೆ ನಂಬಿಕೆ, ವಿಶ್ವಾಸಕ್ಕೆ ಹತ್ತಿರವಾದ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಪತ್ರಕರ್ತರಾದವರು ಕೇವಲ ಒಂದು ವರ್ಗಕ್ಕೆ ಸೀಮಿತವಾಗಬಾರದು. ಅದೇ ರೀತಿ ಚರಿತ್ರೆ, ಇತಿಹಾಸ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕಡೆಗೆ ತಮ್ಮ ಬರವಣಿಗೆ ಇರಬೇಕು ಎಂದು ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಸಂದರ್ಭದಲ್ಲಿ ಪ್ರಾದೇಶಿಕ ಪತ್ರಿಕೆಗಳು ರಾಜ್ಯಮಟ್ಟದ ಪತ್ರಿಕೆಯೊಂದಿಗೆ ಸ್ಪರ್ಧೆಗೆ ಮುಂದಾಗಬೇಕಿದೆ. ಸ್ಥಳೀಯ ಪತ್ರಿಕೆಗಳು ರಾಜ್ಯಮಟ್ಟದ ಪತ್ರಿಕೆಗಳ ರೀತಿಯಲ್ಲಿಯೇ ಕೇವಲ ಸುದ್ದಿಗಳನ್ನು ಮುದ್ರಣ ಮಾಡುವುದರಿಂದ ಪತ್ರಿಕೆ ಅಭಿವೃದ್ಧಿಯಾಗಲ್ಲ. ಬದಲಿಗೆ ಭಿನ್ನವಾದ ಸಂಶೋಧನೆಗಳ ಮೂಲಕ ಹೊಸದಾದ ಲೇಖನ, ಸುದ್ದಿಗಳನ್ನು ಪ್ರಕಟಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಬಹುಸಂಖ್ಯಾತರು ಆಡಳಿತ ನಡೆಸಬೇಕಾದ ದೇಶದಲ್ಲಿ ಅಲ್ಪಸಂಖ್ಯಾತರು ಆಳ್ವಿಕೆ ಮಾಡುತ್ತಿದ್ದಾರೆ. ಇದುವರೆಗೂ ಬಹುಸಂಖ್ಯಾತರು(ದಲಿತರು) ಹಿಂದುಳಿಯಲು ಹಲವಾರು ವ್ಯವಸ್ಥಿತ ಪಿತೂರಿಗಳು ನಡೆಯುತ್ತಿವೆ ಎಂದರು.
ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ತಳ ಸಮುದಾಯಗಳು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದ ಅವರು, ಇಂದಿಗೂ ಭಾರತದಲ್ಲಿ ಜಾತಿ ಪದ್ಧತಿ ಜೀವಂತವಾಗಿದೆ. ಇಂದಿನ ಮಾಧ್ಯಮ ಸಂಪೂರ್ಣ ಮೇಲ್ವರ್ಗದ ಕೈನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಾ.ಪಿ.ಎಸ್.ಹರ್ಷ, ಪತ್ರಕರ್ತ ಶಿವಾನಂದ ತಗಡೂರು, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಘದ ಅಧ್ಯಕ್ಷ ಶ.ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ಪತ್ರಕರ್ತ ರಾಮದೇವ ರಾಕೆ ಅವರಿಗೆ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮರಣಾರ್ಥ ನೀಡುವ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಉತ್ತಮ ಸಾಧನೆಗೈದ ಸಂಪಾದಕರಿಗೆ ನೀಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ಶಿವರಾಮ ದೊಡ್ಡಮನಿ ಅವರಿಗೆ ನೀಡಿ ಸನ್ಮಾನಿಸಲಾಯಿತು.