×
Ad

ಇಚ್ಛಾಶಕ್ತಿ ಕೊರತೆ ದಾಟಿದರೆ ಕನ್ನಡದ ಏಳಿಗೆ ಸಾಧ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2017-08-10 18:33 IST

ಬೆಂಗಳೂರು, ಆ. 10: ಉನ್ನತ ಅಧಿಕಾರಿಗಳು, ಮುಖ್ಯಸ್ಥರು, ನೌಕರರ ಇಚ್ಛಾಶಕ್ತಿ ಕೊರತೆಯಿಂದಲೇ ಕನ್ನಡ ಕುಂಠಿತವಾಗುತ್ತಿದ್ದು, ಅದನ್ನು ದಾಟಿ ಕನ್ನಡದ ಅಸ್ಮಿತೆ ಉಳಿಸುವ ಹೊಣೆಗಾರಿಕೆ ಹೊರಬೇಕು ಮತ್ತು ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಬಳಸುವುದಕ್ಕೆ ಕಟಿಬದ್ಧರಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಕರೆ ನೀಡಿದ್ದಾರೆ.

ಗುರುವಾರ ನಗರದ ಗಾಂಧಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆ ಬಳಸದ ಅಧಿಕಾರಿಗಳು ಎಷ್ಟೇ ದೊಡ್ಡವರಿದ್ದರೂ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ವಿವಿ ಅಂತರ್ಜಾಲ ತಾಣ ಇಂಗ್ಲಿಷ್‌ನಲ್ಲಿದ್ದು, ಕೂಡಲೇ ಅದನ್ನು ಮರು ವಿನ್ಯಾಸಗೊಳಿಸಿ ಪ್ರಧಾನ ಪುಟ ಕನ್ನಡದಲ್ಲಿರುವಂತೆ ಮತ್ತು ಎಲ್ಲ ಮಾಹಿತಿ ಕನ್ನಡದಲ್ಲಿ ಇರುವಂತೆ ರೂಪಿಸಬೇಕೆಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಅವರು, ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಬಳಕೆ ಕುಂಠಿತವಾಗಿದ್ದು, ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ ಎಂದು ಸೂಚಿಸಿದರು.

ರೈತರ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯದಲ್ಲಿ ಪರ್ಯಾಯವಾಗಿ ರೈತರು ಏನು ಮಾಡಬಹುದು ಎನ್ನುವ ಸಮಾಲೋಚನೆ ನಡೆಸುವ ಪ್ರಯತ್ನವಾಗಿ ಆಯಾ ಪ್ರದೇಶದ ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ರೈತರಿಗೆ ಸಲಹೆ ನೀಡುವ ಕಾರ್ಯಾಗಾರಗಳನ್ನು / ಜಾಥಾ ಹಮ್ಮಿಕೊಳ್ಳಲು ವಿವಿಗೆ ತಿಳಿಸಿದ್ದು, ಇದಕ್ಕೆ ಪ್ರಾಧಿಕಾರವೂ ಸಹಕಾರ ನೀಡುತ್ತದೆ ಎಂದರು.
ಸಾರ್ವಜನಿಕ ಉದ್ದಿಮೆಗಳಿಗೆ ಭೇಟಿ ನೀಡಿ ಮಾತನಾಡಿದ ಪ್ರೊ.ಸಿದ್ದರಾಮಯ್ಯ, ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಆದರೆ, ಅಂತರ್ಜಾಲ ತಾಣವನ್ನು ಒಳಗೊಂಡಂತೆ ನಿಗಮ/ಮಂಡಳಿಗಳ ನಿರ್ದೇಶಕರು ಆಂಗ್ಲಭಾಷೆಯ ವ್ಯವಹಾರ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಅರವತ್ತು ನಿಗಮ ಮಂಡಳಿಗಳು ಕನ್ನಡದಲ್ಲಿಯೇ ವ್ಯವಹರಿಸಬೇಕು. ಆಂಗ್ಲ ಭಾಷೆಯಲ್ಲಿ ವ್ಯವಹರಿಸುವ ಕಡತಗಳನ್ನು ತಿರಸ್ಕರಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು. ಆಂಗ್ಲ ಭಾಷೆಯಲ್ಲಿ ವ್ಯವಹರಿಸುವ ನಿಗಮ/ಮಂಡಳಿಗಳ ನಿರ್ದೇಶಕರ ನಾಮನಿರ್ದೇಶನವನ್ನೇ ರದ್ದುಪಡಿಸಲು ಸರಕಾರಕ್ಕೆ ಶಿಸ್ತುಕ್ರಮದ ಶಿಫಾರಸ್ಸು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಸದಸ್ಯರಾದ ಪ್ರಭಾಕರ್ ಪಟೇಲ್, ಪ್ರಕಾಶ್ ಜೈನ್, ಜೆ.ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News