×
Ad

ರಾಜ್ಯದ ಸಮಗ್ರ ವರದಿ ಕೋರಿದ ಮುಖ್ಯಮಂತ್ರಿ: ಕಾಗೋಡು ತಿಮ್ಮಪ್ಪ

Update: 2017-08-10 19:29 IST

ಬೆಂಗಳೂರು, ಆ.10: ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸಮಗ್ರವಾದ ವರದಿಯನ್ನು ಸಿದ್ಧಪಡಿಸಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಭಾಗಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಒಂದು ವಾರದಲ್ಲಿ ವರದಿಯನ್ನು ತರಿಸಿಕೊಳ್ಳಲಾಗುವುದು. ರಾಜ್ಯ ಸರಕಾರವು ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಮಲೆನಾಡು ಪ್ರದೇಶದಲ್ಲೆ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಶೇ.30-32ರಷ್ಟು ಮಳೆ ಕೊರತೆಯಾಗಿದೆ. ಲಿಂಗನಮಕ್ಕಿ, ಭದ್ರಾ ಸೇರಿದಂತೆ ಕಾವೇರಿ ಕಣಿವೆಯಲ್ಲಿನ ಯಾವ ಅಣೆಕಟ್ಟುಗಳು ತುಂಬಿಲ್ಲ. ಈಗಿನ ಪರಿಸ್ಥಿತಿ ತುಂಬಾ ಕಳವಳ ತಂದಿದೆ. ಈ ತಿಂಗಳ ಅಂತ್ಯ ಹಾಗೂ ಮುಂದಿನ ತಿಂಗಳ ಎರಡು ವಾರದೊಳಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಆದುದರಿಂದ, ಈ ತಿಂಗಳ ಅಂತ್ಯದವರೆಗೆ ಕಾದು ನೋಡುವ ಆಲೋಚನೆಯಲ್ಲಿದ್ದೇವೆ. ಆನಂತರ ರಾಜ್ಯದ ಎಲ್ಲ ಭಾಗದಲ್ಲೂ ಪ್ರವಾಸ ಕೈಗೊಂಡು ಪರಿಸ್ಥಿತಿಯ ಅಧ್ಯಯನ ನಡೆಸುತ್ತೇನೆ. ಈ ವರ್ಷದ ಹವಾಮಾನ ಗುಣವನ್ನು ನೋಡಿದರೆ ರಾಜ್ಯಕ್ಕೆ ದೊಡ್ಡ ಅನಾಹುತವಾಗಬಹುದು ಎಂಬ ಆತಂಕ ಕಾಡುತ್ತಿದೆ. ಆದರೂ, ನಿರಾಶರಾಗದೆ ಪರಿಸ್ಥಿತಿ ಎದುರಿಸಲು ಸಿದ್ಧರಾಗುತ್ತಿದ್ದೇವೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

ಹಿಂಗಾರು ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ 5 ಲಕ್ಷ ರೈತರಿಗೆ ಪರಿಹಾರ ವಿತರಿಸಲಾಗಿದ್ದು, ಬ್ಯಾಂಕ್ ಖಾತೆ ಹಾಗೂ ಆಧಾರ್ ಸಂಖ್ಯೆ ಜೋಡಣೆಯ ಸಮಸ್ಯೆಯಿಂದ ಇನ್ನು 2 ಲಕ್ಷ ರೈತರಿಗೆ 10-15 ಕೋಟಿ ರೂ.ಪರಿಹಾರ ವಿತರಿಸಲು ಸಾಧ್ಯವಾಗಿಲ್ಲ. ಇನ್ನು 8-10 ದಿನಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಪರಿಹಾರ ವಿತರಿಸಲಾಗುವುದು ಎಂದು ಅವರು ಹೇಳಿದರು.

ಕೃಷಿ ಚಟುವಟಿಕೆ ಬಿತ್ತನೆ ಪ್ರದೇಶದಲ್ಲಿ 73-74 ಲಕ್ಷ ಹೆಕ್ಟರ್‌ನಲ್ಲಿ 20-23 ಲಕ್ಷ ಹೆಕ್ಟೇರ್ ಬಿತ್ತನೆಯಾಗಿಲ್ಲ. ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜನರಿಗೆ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವ ಸವಾಲು ನಮ್ಮ ಮುಂದಿದೆ. ಕುಡಿಯುವ ನೀರಿನ ಸಮಸ್ಯೆ ಇರುವೆಡೆ ಹೊಸಬೋರ್‌ವೆಲ್ ಕೊರೆಸುವುದು, ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

1500 ಕೆರೆಗಳನ್ನು ಡಿನೋಟಿಫಿಕೇಷನ್ ಮಾಡುತ್ತೇವೆ ಎಂದು ಯಾರೂ ಎಲ್ಲಿ ಹೇಳಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಊಹಾಪೋಹಗಳಿಂದ ಕೂಡಿದ ಇಂತಹ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ. ಕೆರೆಗಳನ್ನು ಡಿನೋಟಿಫಿಕೇಷನ್ ಮಾಡಲು ಈಗಿರುವ ಕಾನೂನಿನಲ್ಲಿ ಅವಕಾಶವಿಲ್ಲ. ಅದಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಮಾಧ್ಯಮಗಳಲ್ಲಿ ಅನವಶ್ಯಕವಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

94 ಸಿ ಹಾಗೂ 94 ಸಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಗ್ರಾಮ ಲೆಕ್ಕಿಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಾಗೂ ಕಂದಾಯ ನಿರೀಕ್ಷಕ ಜಂಟಿಯಾಗಿ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ, ನಾವು ಕಳುಹಿಸಿಕೊಟ್ಟಿರುವ ಪಟ್ಟಿಯನ್ನು ಪರಿಶೀಲಿಸಬೇಕು. ಯಾರಾದರೂ ಅರ್ಜಿ ಸಲ್ಲಿಸದೆ ಇದ್ದರೆ, ಅಂತಹವರಿಂದ ಸ್ಥಳದಲ್ಲೆ ಅರ್ಜಿ ಪಡೆದು ನೋಂದಣಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಸರಕಾರಿ ಭೂಮಿಯು ಒಳಗೊಂಡಂತೆ ಪೋಡಿ ಮುಕ್ತ ಗ್ರಾಮಗಳನ್ನು ಮಾಡಲಾಗುತ್ತಿದೆ. ಸರ್ವೇಯರ್‌ಗಳ ಕೊರತೆಯಿಂದ ಸ್ವಲ್ಪ ವಿಳಂಬವಾಗಿದೆ. ‘ವಾಸಿಸುವವನೆ ಮನೆದೊಡೆಯ’ ಕಾನೂನು ಸದನದಲ್ಲಿ ಅಂಗೀಕಾರವಾಗಿದೆ. ಕಾಯ್ದೆಯನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ. ಮುಂದಿನ ವಾರ ನಾನೇ ಹೊಸದಿಲ್ಲಿಗೆ ಹೋಗಿ ಕಾಯ್ದೆಗೆ ಅನುಮತಿ ಪಡೆಯುವ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಸರಕಾರದಿಂದ ಹೊಸದಾಗಿ ಘೋಷಿಸಲ್ಪಡುವ ಗ್ರಾಮಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಈ ಕಾನೂನು ಅನ್ವಯವಾಗುತ್ತದೆ. ಇದರಿಂದ ಸುಮಾರು 10-20 ಲಕ್ಷ ಜನರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟ ಆರಂಭವಾಗಿದ್ದು ಬುದ್ಧನ ಕಾಲದಲ್ಲಿ, ಆನಂತರ ಬಸವಣ್ಣ ಆ ಪ್ರಯತ್ನ ನಡೆಸಿದರು. ಇವೆರೆಡು ಚಳವಳಿಗಳು ಮಧ್ಯದಲ್ಲೆ ತನ್ನ ಅಸ್ತಿತ್ವವನ್ನು ಕಳೆದುಕೊಂಡವು. ಬಸವಣ್ಣ ಕೂಡಲಸಂಗಮದಲ್ಲಿ ಐಕ್ಯನಾದ. ಜಾತಿವಾದಿಗಳು ಆತನನ್ನು ನಾಶ ಮಾಡಿದರು. ಅನುಭವ ಮಂಟಪದಲ್ಲಿ ಇದ್ದವರನ್ನು ಓಡಿಸಲಾಯಿತು. ಈ ದೇಶದಲ್ಲಿ ಜಾತಿ ವಿನಾಶವಾಗಬೇಕಾದರೆ ಸ್ವಾತಂತ್ರ ಹೋರಾಟದ ಮಾದರಿಯಲ್ಲಿ ದೊಡ್ಡ ಹೋರಾಟ ನಡೆಯಬೇಕು.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News