×
Ad

​ಇತಿಹಾಸದ ದಾಖಲೆಗಳಿಂದ ಮರೆಯಾದ ಮಹದೇವಪ್ಪ: ಡಾ.ಮನುಬಳಿಗಾರ್

Update: 2017-08-10 19:34 IST

ಬೆಂಗಳೂರು, ಆ.10: ಗಾಂಧಿ ಕರೆ ನೀಡಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕರ್ನಾಟಕದ ಏಕೈಕ ವ್ಯಕ್ತಿ ಮೈಲಾರ ಮಹದೇವಪ್ಪ. ಅವರ ಕುರಿತಂತೆ ನಮ್ಮ ಇತಿಹಾಸದಲ್ಲಿ ಸರಿಯಾದ ದಾಖಲೆಗಳಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ದತ್ತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ‘ಚಂಪಾರಣ್ಯ ಸತ್ಯಾಗ್ರಹ ಶತಮಾನೋತ್ಸವ ಮತ್ತು ಕ್ವಿಟ್ ಇಂಡಿಯಾ ಚಳವಳಿಯ 75 ನೆ ವರ್ಷಾಚರಣೆ ಹಾಗೂ ಮೈಲಾರ ಮಹದೇವಪ್ಪ ದತ್ತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಾತ್ಮಗಾಂಧೀಜಿ ಕರೆ ನೀಡಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಮೈಲಾರ ಮಹದೇವಪ್ಪ ಅವರಿಗೆ ಕನ್ನಡ ನಾಡು ಋಣಿಯಾಗಿರಬೇಕು. ಮಹದೇವಪ್ಪ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸದೇ ಇದ್ದಿದ್ದರೆ ಈ ಚಳವಳಿಗೆ ಸಂಬಂಧಿಸಿದಂತೆ ನಮ್ಮ ರಾಜ್ಯದ ಇತಿಹಾಸ ಖಾಲಿಯಾಗಿ ಇರುತ್ತಿತ್ತು. ಆದರೆ, ನಮ್ಮ ನಾಡಿನ ಕೀರ್ತಿ ಬೆಳಗಿಸಿದ ಮಹದೇವಪ್ಪ ಅವರ ಸರಿಯಾದ ಇತಿಹಾಸ ಎಲ್ಲಿಯೂ ದಾಖಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶಕ್ಕಾಗಿ ತನ್ನ ಕೊನೆಯುಸಿರುವವರೆಗೂ ಹೋರಾಡಿ ಜೀವನವನ್ನು ತ್ಯಾಗ ಮಾಡಿದ ಮಹದೇವಪ್ಪ ಕಟ್ಟಾ ಗಾಂಧೀಜಿ ಅಭಿಮಾನಿಯಾಗಿದ್ದರು. ಅಲ್ಲದೆ, ಗಾಂಧಿ ತತ್ವವನ್ನು ಅನುಸರಿಸುವ ಮೂಲಕ ಅನುಷ್ಠಾನಗೊಳಿಸಿದ್ದರು. ಗಾಂಧಿ ನಡೆದ ಅಹಿಂಸೆ ದಾರಿಯನ್ನೇ ತನ್ನ ಉಸಿರಾಗಿಸಿಕೊಂಡಿದ್ದರು ಎಂದ ಅವರು, ಮಹದೇವಪ್ಪ ಗುಂಡೇಟಿಗೆ ಗುರಿಯಾಗಿ ನೆಲದ ಮೇಲೆ ಬಿದ್ದಿದ್ದರೂ ಆತನ ಸಹಚರರ ಮೇಲೆ ಹಲ್ಲೆ ನಡೆಸಬೇಡಿ, ಅಹಿಂಸೆ ಅನುಸರಿಸುವಂತೆ ಪೊಲೀಸರಿಗೆ ಸಲಹೆ ನೀಡಿದ್ದರು ಎಂದು ತಿಳಿಸಿದರು.

ನಾಡೋಜ ನಾರಾಯಣರೆಡ್ಡಿ ಮಾತನಾಡಿ, ಗಾಂಧೀಜಿ ಹೇಳಿದಷ್ಟು ಸಮಯ ದುಡಿದು ಅದರಲ್ಲಿ ಶೇ.20 ರಷ್ಟು ಉಳಿತಾಯ ಮಾಡಿದರೂ ಶ್ರೀಮಂತರಾಗಬಹುದು. ಬೇರೆಯವರ ಶ್ರೀಮಂತಿಕೆಯನ್ನು ಕಂಡು ಕರುಬುವ, ದೋಚುವ ಅಗತ್ಯವಿಲ್ಲ. ನಮ್ಮ ದೇಶದ ರೈತರು, ಪ್ರಧಾನಿ, ರಾಷ್ಟ್ರಪತಿ, ಸಚಿವರು, ಸಂಸದರು, ಶಾಸಕರು ಸೇರಿದಂತೆ ಎಲ್ಲ ಹಂತದ ಜನಪ್ರತಿನಿಧಿಗಳು ಗಾಂಧಿ ಮಾರ್ಗವನ್ನು ಅನುಸರಿಸಿದ್ದರೆ ಇವತ್ತು ನಮ್ಮ ದೇಶ ಹೀಗಿರುತ್ತಿರಲಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ಕ್ರೀಡಾ ಇಲಾಖೆಯ ಸಂಪರ್ಕಾಧಿಕಾರಿ ಡಾ.ಗಣನಾಥಶೆಟ್ಟಿ, ಸ್ವಾತಂತ್ರ ಹೋರಾಟಗಾರರಾದ ಮಠದ್, ವೀರಯ್ಯ ಹಿರೇಮಠ ಉಪಸ್ಥಿತರಿದ್ದರು. ಇದೇ ವೇಳೆ ಮಹದೇವಪ್ಪ ಅವರ ಪುತ್ರಿ ಅವರ ‘ಸಂಗ್ರಾಮದ ನೆನಪುಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News