ಸಂಘ ಪರಿವಾರ ಮುಖಂಡರು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಆದೇಶ

Update: 2017-08-10 14:33 GMT

ಬೆಂಗಳೂರು, ಆ.10: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಕೋಮುಗಲಭೆಯಲ್ಲಿ ಕೊಲೆಯಾದ ಶರತ್ ಕುಮಾರ್ ಅವರ ಮೃತದೇಹದ ಮೆರವಣಿಗೆ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿ ಸಾವಿರಾರು ಜನರನ್ನು ಸೇರಿಸಿ ಗಲಾಟೆ ಎಬ್ಬಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟು ಮಾಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಿಸಿದ ಎಫ್‌ಐಆರ್ ರದ್ದು ಕೋರಿ ಸಂಘ ಪರಿವಾರದ ಸಂಘಟನೆಗಳ ಐವರು ಮುಖಂಡರು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಬಂಟ್ವಾಳ ಪೊಲೀಸರು ದಾಖಲಿಸಿದ ಎಫ್‌ಐಆರ್ ರದ್ದು ಕೋರಿ ಸತ್ಯಜಿತ್ ಸುರತ್ಕಲ್, ಹಿಂದೂ ಜಾಗರಣಾ ವೇದಿಕೆಯ ಹರೀಶ್ ಪೂಂಜಾ, ಹಿಂದೂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮುರಳಿ ಕೃಷ್ಣ ಹಸಂತಡ್ಕ, ದಕ್ಷಿಣ ಕನ್ನಡ ಜಿಲ್ಲಾ ಭಜರಂಗ ದಳದ ಅಧ್ಯಕ್ಷ ಶರಣ್ ಪಂಪ್‌ವೆಲ್, ಗೋರಕ್ಷಕ ಪ್ರಮುಖ ಸಂಘದ ಪ್ರದೀಪ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ಈ ಅರ್ಜಿ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಸರಕಾರಿ ಅಭಿಯೋಜಕ ರಾಚಯ್ಯ ಅವರು ವಾದಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು.

ಪ್ರಕರಣವೇನು: ಕಳೆದ ಜುಲೈ 8ರಂದು ಮಂಗಳೂರಿನ ಎ.ಜೆ.ಆಸ್ಪತ್ರೆಯಿಂದ ಶರತ್ ಕುಮಾರ್ ಮೃತದೇಹವನ್ನು ಸಜಿಪದ ಕಂದೂರಿಯ ಅವರ ಮನೆಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಅರ್ಜಿದಾರರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಸುಮಾರು 2000 ಜನರನ್ನು ಸೇರಿಸಿ ಶವ ವಾಹನದ ಜೊತೆಗೆ ಕರೆದುಕೊಂಡು ಬಂದಿದ್ದರು. ಮೆರವಣಿಗೆಯು ಬಿಮುಡ ಗ್ರಾಮದ ಕೈಕಂಬ ಸುಲ್ತಾನ್ ಸಂಕೀರ್ಣದ ಮುಂದೆ ಹೋಗುತ್ತಿದ್ದಾಗ ಅರ್ಜಿದಾರರು ಮತ್ತು ಅವರ ಬೆಂಬಲಿಗರು, ಅಲ್ಲಿದ್ದ ಮುಸ್ಲಿಮ್ ಸಂಘಟನೆಗೆ ಸೇರಿದ ಜನರಿಗೆ ಅವಾಚ್ಯ ಶಬ್ದಗಳಿಂದ ಬೈದು, ಏಕಾಏಕಿ ಕಲ್ಲುಗಳನ್ನು ಸೇರಿದ್ದ ಪೊಲೀಸರ ಹಾಗೂ ಸಾರ್ವಜನಿಕರು ಮೇಲೆ ಎಸೆದರು. ಇತರರು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು ತೂರಿದರು. ಇದರಿಂದ ಗಲಾಟೆ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಯಿತು. ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಉಂಟಾಯಿತು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಈ ಎಫ್‌ಐಆರ್ ರದ್ದುಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News