×
Ad

‘ಲಿಂಗಾಯತ’ ಸ್ವತಂತ್ರ ಧರ್ಮ: ಮಠಾಧೀಶರು, ಚಿಂತಕರು ಮುಖಂಡರ ಸಭೆಯಲ್ಲಿ ಒಮ್ಮತ

Update: 2017-08-10 20:14 IST

ಬೆಂಗಳೂರು, ಆ.10: ಲಿಂಗಾಯತ ಸಮುದಾಯಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನಕ್ಕಾಗಿ ಆಗ್ರಹಿಸಿ ‘ಲಿಂಗಾಯತ ಮಹಾ ಸಂಘ’ದ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ಲಿಂಗಾಯತ ಸಮುದಾಯದ ಮಠಾಧೀಶರು, ಚಿಂತಕರು, ಮುಖಂಡರು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.

ಲಿಂಗಾಯತ ಸಮುದಾಯಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಗುರುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ತೋಂಟದ ಸಿದ್ದಲಿಂಗಾ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಸುದೀರ್ಘ ಸಮಾಲೋಚನ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.

   ವಚನಗಳೇ ಧರ್ಮಗ್ರಂಥ: ವೀರಶೈವ- ಲಿಂಗಾಯತ ಎರಡು ಒಂದಲ್ಲ. ವೀರಶೈವ, ಲಿಂಗಾಯತರ ಒಳ ಪಂಗಡ. ಲಿಂಗಾಯತ ಸಮುದಾಯಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಕಲ್ಪಿಸಬೇಕು. ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಬಸವಣ್ಣ ಅವರೇ ಧರ್ಮಸ್ಥಾಪಕರು. ವಚನಗಳೇ ಧರ್ಮಗ್ರಂಥ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಬಸವಣ್ಣ ಸ್ಥಾಪಿಸಿದ ಐತಿಹಾಸಿಕ ಸಿದ್ಧಾಂತ, ವಚನಗಳನ್ನು ವೀರಶೈವರು ಬಳಸಬಾರದು. ವಿರಕ್ತ ಮಠಗಳ ಮಠಾಧೀಶರು ಬಸವಾದಿಶರಣರ ತತ್ವ ಸಿದ್ಧಾಂತಗಳನ್ನು ಲೋಕಕ್ಕೆ ತಲುಪಿಸದಿದ್ದರೆ ಅಂತಹ ಮಠಾಧೀಶರು ಪೀಠ ತ್ಯಜಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದ್ದಾರೆ.

1941ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಎಂದು ಹೆಸರು ಬದಲಿಸುವ ನಿರ್ಣಯ ಕೈಗೊಂಡಿದ್ದು, ಅದು ಜಾರಿಗೊಳಿಸಲು ಸಭೆಯಲ್ಲಿ ಆಗ್ರಹಿಸಿದ್ದಾರೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಮಾದಾರ್ ಮಾತನಾಡಿ, ಲಿಂಗಾಯತ ಧರ್ಮದ ಸಂಕೇತ, ವೇಷಭೂಷಣ, ಆಚರಣೆಗಳ ಕುರಿತು ನಿರ್ಧರಿಸಲು ಕೂಡಲೆ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.

ವೀರಶೈವರು ಲಿಂಗಾಯತರ ಒಳ ಪಂಗಡ. ಅವರನ್ನು ಮನವೊಲಿಸಿ ಧರ್ಮದೊಳಗೆ ಸೇರಿಸಿಕೊಳ್ಳಲಾಗುವುದು. ಮುಂದಿನ ಜನಗಣತಿಯಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಕೋಡ್ ನೀಡಲು ಸರಕಾರಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ, ಸಚಿವರಾದ ವಿನಯ್ ಕುಲಕರ್ಣಿ, ಎಂ.ಬಿ.ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಲಿಂಗಾಯತ ಸ್ವಾಮೀಜಿಗಳಾದ ಡಾ.ಸಿದ್ದರಾಮ ಮಹಾಸ್ವಾಮಿ, ಡಾ.ಬಸವಲಿಂಗಪಟ್ಟದೇವರು, ಜಯ ಬಸವ ಮೃತ್ಯುಂಜಯ ಮಹಾಸ್ವಾಮೀಜಿ, ಮಹಾಂತಪ್ಪಗಳವರು, ಮಲ್ಲಿಕಾರ್ಜುನ ಮಹಾಸ್ವಾಮಿ, ಶಿವರುದ್ರ ಮಹಾಸ್ವಾಮಿ ಸೇರಿದಂತೆ ಇತರರು ಇದ್ದರು.

ಲಿಂಗಾಯತ ಧರ್ಮ ಎಡಪರ ಚಿಂತನೆ, ಜನಪರ ಇರುವಂತದ್ಧು. ವೀರಶೈವ-ಲಿಂಗಾಯತರು ಕೌರವ ಪಾಂಡವರಂತೆ ವೈರಿಗಳಲ್ಲ. ನಮ್ಮಟ್ಟಿಗೆ ಬಂದರೆ ಸಾಮದಿಂದ ಹೋಗೋಣ. ಇದರಲ್ಲಿ ಯಾವುದೇ ಬಲವಂತವಿಲ್ಲ.

-ಡಾ.ಸಿದ್ದಲಿಂಗ ಮಹಾಸ್ವಾಮಿ, ತೋಂಟದಾರ್ಯ ಮಠ ಗದಗ

ಜೈನ್ ಧರ್ಮ, ಶಿಖ್ ಧರ್ಮದ ಮಾದರಿಯಲ್ಲಿ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ. ಈ ಕುರಿತು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಮನವರಿಕೆ ಮಾಡಲಾಗುವುದು.

-ಎಂ.ಬಿ.ಪಾಟೀಲ್, ಬೃಹತ್ ನೀರಾವರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News