ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಹೆಚ್ಚಳ
ಬೆಂಗಳೂರು, ಆ.10: ಮೀನುಗಾರರ ಮರಣ ಪ್ರಕರಣಗಳಿಗೆ ರಾಜ್ಯ ಸರಕಾರದಿಂದ ನೀಡುತ್ತಿದ್ದ ವಿವಿಧ ಪರಿಹಾರ ನಿಧಿಯ ಹಣದ ಮೊತ್ತವನ್ನು ಹೆಚ್ಚಳ ಮಾಡಲು ಸರಕಾರ ತೀರ್ಮಾನಿಸಿದೆ.
ಅನಿರಿಕ್ಷೀತ ಮರಣ ಹೊಂದಿದವರಿಗೆ 2 ರಿಂದ 3 ಲಕ್ಷಕ್ಕೆ, ಸಮುದ್ರದಲ್ಲಿ ಮರಣಹೊಂದಿದ ಪ್ರಕರಣಗಳಿಗೆ 5 ಲಕ್ಷ ದಿಂದ 6.00 ಲಕ್ಷ ರೂ.ಗಳಿಗೆ, ಬಲೆ ಮತ್ತು ಆಸ್ತಿ ಹಾನಿ, ದೋಣಿ ಹಾನಿ ಪ್ರಕರಣಗಳಿಗೆ 50 ಸಾವಿರದಿಂದ 1 ಲಕ್ಷ ರೂ.ಗಳಿಗೆ ಹಾಗೂ ವೈದ್ಯಕೀಯ ವೆಚ್ಚವನ್ನು 50 ಸಾವಿರದಿಂದ 1 ಲಕ್ಷ ರೂ.ಗಳಿಗೆ, ವಿಮೆ ಪರಿಹಾರ ಪಡೆಯದ ಪ್ರಕರಣಗಳಿಗೆ 80 ಸಾವಿರದಿಂದ 1.20 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಇತ್ತೀಚಿಗೆ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ಹೊಸದಾಗಿ ಪುನರ್ ರಚನೆಯಾದ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸಭೆ ನಡೆಸಿ, ಈ ಹಿಂದೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ಪರಿಷ್ಕರಿಸಲಾಯಿತು. ಇದೇ ವೇಳೆ ಸಮುದ್ರದಲ್ಲಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪ್ರಾಣ ರಕ್ಷಣೆ ಮಾಡಿದ ಮೀನುಗಾರರಿಗೆ ಹಾಗೂ ಪ್ರಾಣ ರಕ್ಷಣೆ ಮಾಡಿದ ದೋಣಿಯ ತಾಂಡೇಲರಿಗೆ ಶೌರ್ಯ ಪ್ರಶಸ್ತಿಯ ಜೊತೆಗೆ 50 ಸಾವಿರ ಪುರಸ್ಕಾರ ನೀಡಿ ಗೌರವಿಸಲು ತೀರ್ಮಾನ ಮಾಡಲಾಯಿತು.
ಅದೇ ರೀತಿ ಯಾಂತ್ರೀಕೃತ ದೋಣಿ ಮಾಲಕರು ಪಡೆಯುತ್ತಿರುವ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿ ಸಹಾಯಧನದಲ್ಲಿ ಶೇ. 1.5 ಬದಲಿಗೆ ಶೇ 1 ರಷ್ಟು ಮೊತ್ತವನ್ನು ಮಾತ್ರ ಸಂಕಷ್ಟ ಪರಿಹಾರ ನಿಧಿಗೆ ಪಾವತಿಸಲು ಸಭೆಯು ನಿರ್ಣಯಿಸಿತು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅಪರ ಕಾರ್ಯದರ್ಶಿ ಲೀಲಾವತಿ, ಉತ್ತರ ಕನ್ನಡ ಜಿಲ್ಲಾ ಕನ್ನಡ ಜಿಲ್ಲಾ ಸಹಕಾರಿ ಮೀನುಗಾರಿಕೆ ಮಹಾ ಮಂಡಳಿಯು ಅಧ್ಯಕ್ಷ ಗಣಪತಿ ಮಾಂಗ್ರೆ, ರಾಜ್ಯ ಸಹಕಾರಿ ಮೀನುಗಾರಿಕೆ ಮಹಾ ಮಂಡಳಿಯ ಅಧ್ಯಕ್ಷ ಮಾದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.