ವರ್ಣಭೇದ ನೀತಿ: ಟ್ವಿಟರ್ ನಲ್ಲಿ ಕಿಡಿಕಾರಿದ ಕ್ರಿಕೆಟಿಗ ಮುಕುಂದ್

Update: 2017-08-10 18:54 GMT

ಪಲ್ಲೆಕಲ್, ಆ.10: ವರ್ಣಭೇದ ನೀತಿ ವಿಶ್ವ ಕ್ರೀಡಾಲೋಕದಲ್ಲ್ಲಿ ಹಾಸುಹೊಕ್ಕಾಗಿದೆ. ಪ್ರಸ್ತುತ ಟೀಮ್ ಇಂಡಿಯಾದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಆರಂಭಿಕ ಆಟಗಾರ ಅಭಿನವ್ ಮುಕುಂದ್‌ಗೆ ಇಂತಹ ಅನುಭವವಾಗಿದ್ದು, ಕಪ್ಪುಬಣ್ಣದವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿ ಪೋಸ್ಟ್ ಮಾಡುವವರ ವಿರುದ್ಧ ಬುಧವಾರ ಕಿಡಿಕಾರಿದ್ದಾರೆ.
 
‘‘ನಾನು 10ನೆ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದೇನೆ. ಹಂತಹಂತವಾಗಿ ಮೇಲಕ್ಕೇರಿದ್ದೇನೆ. ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವುದು ಒಂದು ಮಹಾಗೌರವ. ಅನುಕಂಪ ಗಿಟ್ಟಿಸಿಕೊಳ್ಳಲು ನಾನು ಹೀಗೆ ಬರೆಯುತ್ತಿಲ್ಲ.. ಈ ಬರಹದಿಂದ ಜನರ ಮನಸ್ಥಿತಿ ಬದಲಾಗುವ ವಿಶ್ವಾಸದಲ್ಲಿದ್ದೇನೆ’’ ಎಂದು ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನ2ನೆ ಇನಿಂಗ್ಸ್‌ನಲ್ಲಿ 81 ರನ್ ಗಳಿಸಿದ್ದ ಮುಕುಂದ್ ಟ್ವೀಟ್ ಮಾಡಿದ್ದಾರೆ.

‘‘ನಾನು 15ನೆ ವರ್ಷದಿಂದ ದೇಶದೊಳಗೆ ಹಾಗೂ ಹೊರಗೆ ಸಾಕಷ್ಟು ಸಂಚರಿಸಿದ್ದೇನೆ. ನಾನು ಚಿಕ್ಕವನಿರುವಾಗಲೇ ಜನರು ನನ್ನ ಮೈಬಣ್ಣವನ್ನು ನೋಡಿ ಗೇಲಿ ಮಾಡುತ್ತಿದ್ದರು. ಬಿಸಿಲಿನಲ್ಲಿ ಕ್ರಿಕೆಟ್ ಆಡುವುದು, ಅಭ್ಯಾಸ ನಡೆಸುತ್ತಿರುತ್ತೇನೆ. ನಾನು ಹೊರಾಂಗಣದಲ್ಲಿ ಹೆಚ್ಚಿನ ಸಮಯ ಕಳೆದಿರುವ ಹಿನ್ನೆಲೆಯಲ್ಲಿ ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ನಾನು ದೇಶದಲ್ಲಿ ಅತ್ಯಂತ ಹೆಚ್ಚು ಉಷ್ಣಾಂಶವಿರುವ ರಾಜ್ಯ ಚೆನ್ನೈ ಮೂಲದವನು. ನನ್ನ ಬಾಲ್ಯದ ಹೆಚ್ಚಿನ ಸಮಯವನ್ನು ಕ್ರಿಕೆಟ್ ಮೈದಾನದಲ್ಲಿ ಕಳೆದಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಮನಸ್ಸಿಗೆ ನೋವುಂಟು ಮಾಡುವ ರೀತಿ ವರ್ತಿಸುತ್ತಾರೆ. ಅವರು ನಮ್ಮ ಹಿಡಿತದಲ್ಲಿಲ್ಲ. ಕಪ್ಪುವರ್ಣದವರೆಂದು ಚಿಂತಿಸದೇ ಸತ್ಯವಂತರಾಗಿರಿ, ತಮ್ಮ ಕೆಲಸದತ್ತ ಗಮನವಿಡಿ. ನನ್ನ ಈ ಟ್ವೀಟ್ ನಮ್ಮ ತಂಡದ ಯಾವ ಸದಸ್ಯರಿಗೆ ಸಂಬಂಧಿಸಿಲ್ಲ. ಜನರ ಬಣ್ಣದ ಬಗ್ಗೆ ಅಸಭ್ಯವಾಗಿ ಪೋಸ್ಟ್ ಮಾಡುವವರು ನನ್ನ ಗುರಿಯಾಗಿದ್ದಾರೆ’’ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News