×
Ad

ಯುವತಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನ: ಆಟೊ ಚಾಲಕರಿಬ್ಬರ ಬಂಧನ

Update: 2017-08-11 17:49 IST

ಬೆಂಗಳೂರು, ಆ.11: ಯುವತಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರು ಆಟೊ ಚಾಲಕರನ್ನು ಇಲ್ಲಿನ ಯಶವಂತಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಯಶವಂತಪುರದ ಬಿ.ಕೆ.ನಗರದ ಫಯಾಝ್(30) ಮತ್ತು ಝುಬೇರ್ ಖಾನ್(25) ಬಂಧಿತ ಆಟೊ ಚಾಲಕರಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಚಿತ್ರದುರ್ಗದಿಂದ ಗುರುವಾರ ರಾತ್ರಿ ಬೆಂಗಳೂರಿಗೆ ಬಂದಿದ್ದ 19 ವರ್ಷದ ಯುವತಿ ಸೋದರ ಸಂಬಂಧಿ ಜೊತೆ ನೆಂಟರೊಬ್ಬರ ಮನೆಗೆ ಹೋಗಿದ್ದು, ಅವರು ಸಿಗದ ಕಾರಣ ತಮ್ಮ ಊರಿಗೆ ವಾಪಸ್ಸಾಗಲು ಸಂಜೆ 4 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ ಎಂದರು.

ಚಿತ್ರದುರ್ಗಕ್ಕೆ ರಾತ್ರಿ 12 ಗಂಟೆಗೆ ರೈಲು ಇರುವುದಾಗಿ ತಿಳಿಸಿದ್ದು, ರೈಲಿಗೆ ಹೋಗಲು ಹಣ ಇಲ್ಲದೆ ನಿಲ್ದಾಣದಲ್ಲೇ ಕುಳಿತಿದ್ದಾಗ ಇವರ ಬಳಿ ಬಂದ ಮೂವರು ದುಷ್ಕರ್ಮಿಗಳ ಪೈಕಿ ಒಬ್ಬಾತ ಯುವತಿ ಜೊತೆಯಲ್ಲಿದ್ದ ಸೋದರ ಸಂಬಂಧಿಯನ್ನು ಸ್ವಲ್ಪದೂರ ಕರೆದುಕೊಂಡು ಹೋಗಿ ಆತನಿಗೆ ಥಳಿಸಿ ಬೇರೆಡೆಗೆ ಎಳೆದುಕೊಂಡು ಹೋಗಿದ್ದಾನೆ ಎಂದು ಮಾಹಿತಿ ನೀಡಿದರು.

ಇತ್ತ ಆರೋಪಿ ಫಯಾಝ್ ಬಲವಂತವಾಗಿ ಯುವತಿಯನ್ನು ಅಂಗಡಿಯೊಂದರ ಬಳಿ ಕರೆದುಕೊಂಡು ಹೋಗಿ ಬಾಗಿಲನ್ನು ಹಾಕಿಕೊಂಡು ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಸಹಾಯಕ್ಕಾಗಿ ಯುವತಿ ಚೀರಿಕೊಂಡಿದ್ದಾಳೆ. ಅದೇ ಸಮಯಕ್ಕೆ ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಆಟೊ ಚಾಲಕ ಅಸ್ಗರ್ ಪಾಶ ಎಂಬುವರ ನೆರವಿನಿಂದ ಹಲ್ಲೆಗೊಳಗಾದ ಸೋದರ ಸಂಬಂಧಿ ಯಶವಂತಪುರ ಠಾಣೆಗೆ ಹೋಗಿ ವಿಷಯ ತಿಳಿಸಿರುವುದಾಗಿ ಆಯುಕ್ತರು ವಿವರಿಸಿದರು.

ಸುದ್ದಿ ತಿಳಿದ ರಾತ್ರಿ ಗಸ್ತಿನ ಕರ್ತವ್ಯದಲ್ಲಿದ್ದ ಪೊಲೀಸರು, ಆಟೊ ಚಾಲಕ ಅಸ್ಗರ್ ಪಾಶ ಜೊತೆಗೂಡಿ ಯುವತಿಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ ನಗರ ಪೊಲೀಸ್ ಆಯುಕ್ತರು, ಪೊಲೀಸರ ಕಾರ್ಯವನ್ನು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News