2ನೆ ದಿನವೂ ಬಿಎಸ್‌ವೈ ಸಂಬಂಧಿಯ ವಿಚಾರಣೆ
ಬೆಂಗಳೂರು, ಆ.11: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕನ ಅಪಹರಣ ಪ್ರಕರಣ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂಬಂಧಿ ಸಂತೋಷ್‌ನನ್ನು ಎರಡನೆ ದಿನವೂ ಪೊಲೀಸರು ವಿಚಾರಣೆ ನಡೆಸಿದರು.
ಶುಕ್ರವಾರ ಮಲ್ಲೇಶ್ವರಂ ಉಪ ವಿಭಾಗದ ಎಸಿಬಿ ಆನಂದ್ ಬಡಿಗೇರ್ ಹಾಗೂ ಇಬ್ಬರು ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಎನ್.ಆರ್.ಸಂತೋಷ್‌ನನ್ನು ವಿಚಾರಣೆ ನಡೆಸಿ 50 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಯುವ ಮೋರ್ಚಾ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಹಾಗೂ ವಿನಯ್ ನನಗೆ ಆಪ್ತ ಸ್ನೇಹಿತರು. ಸ್ಥಳೀಯವಾಗಿ ಪಕ್ಷ ಸಂಘಟಿಸುವಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೆವು. ವಿನಯ್ ಅಪಹರಣ ಯತ್ನಕ್ಕೂ ನನಗೂ ಸಂಬಂಧವಿಲ್ಲ ಎಂದು ಸಂತೋಷ್ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಸಿಡಿಗಾಗಿ ವಿನಯ್ ಅಪಹರಣಕ್ಕೆ ಯತ್ನಿಸಲಾಯಿತು ಎಂದು ಕೇಳಿದ್ದಕ್ಕೆ ಯಾವ ಸಿಡಿಯ ಬಗ್ಗೆಯೂ ನನಗೆ ಗೊತ್ತಿಲ್ಲ. ಈಗಲೂ ನಾವು ಪಕ್ಷ ಸಂಘಟಿಸುವ ಸ್ನೇಹಿತರು ಎಂದು ಸಂತೋಷ್ ನುಡಿದಿದ್ದಾನೆ. ವಿವಿಧ ರೀತಿಗಳಲ್ಲಿ ಪ್ರಶ್ನೆಗಳನ್ನು ಕೇಳಿದ್ದೇವೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದು, ಇಡೀ ಪ್ರಕರಣದ ಕೇಂದ್ರ ಬಿಂದುವಾಗಿರುವ ಸಿಡಿ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.