×
Ad

ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಗೆ ಗ್ರಾಮೀಣ ಕ್ರೀಡೆ ಉತ್ತಮ: ಮೇಯರ್ ಪದ್ಮಾವತಿ

Update: 2017-08-11 17:58 IST

ಬೆಂಗಳೂರು, ಆ.11: ಮಕ್ಕಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಗ್ರಾಮೀಣ ಕ್ರೀಡೆ ಬಹಳ ಉಪಕಾರಿಯಾಗಿದ್ದು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ತಮ್ಮ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳ ಕುರಿತು ಹೆಚ್ಚಿನ ಆಸಕ್ತಿ ಮೂಡಿಸಬೇಕು ಎಂದು ಮೇಯರ್ ಪದ್ಮಾವತಿ ತಿಳಿಸಿದ್ದಾರೆ.

ಪ್ರಕಾಶ್ ನಗರ ವಾರ್ಡ್ ಬಿಬಿಎಂಪಿ ಆಟದ ಮೈದಾನದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಲಗೋರಿ, ಕುಂಟೆಬಿಲ್ಲೆ, ಗೋಲಿ ಆಟ, ಹಗ್ಗ ಜಗ್ಗಾಟ ಸೇರಿದಂತೆ 12ಕ್ಕೂ ಹೆಚ್ಚು ಗ್ರಾಮೀಣ ಆಟಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಆಟಗಳಿಗಿರುವ ಸೊಗಡನ್ನು ನಗರದ ಜನತೆ ಅರಿತು ಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಮಕ್ಕಳಿಗೆ ಶಾಲಾ ತರಗತಿ ಹಾಗೂ ಕಂಪ್ಯೂಟರ್ ಆಟಗಳ ಹೊರತು ಮತ್ತೇನು ತಿಳಿಯದಾಗಿದೆ. ಇದರಿಂದ ಮಕ್ಕಳ ಅರಿವಿನ ವಿಸ್ತಾರವೂ ಚಿಕ್ಕದಾಗಿದೆ. ಪರಿಸರದಲ್ಲಿರುವ ಕಲ್ಲು, ಮರಗಿಡಗಳಿಂದಲೇ ತಮ್ಮ ಆಟದ ವಸ್ತುಗಳನ್ನು ನಿರ್ಮಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳುವಳಿಕೆಯಿಲ್ಲ. ಹೀಗಾಗಿ ಪ್ಲಾಸ್ಟಿಕ್‌ನಂತಹ ಅನಗತ್ಯ ವಸ್ತುಗಳು ಮಕ್ಕಳ ಕೈಯಲ್ಲಿ ಆಟಿಕೆಯ ವಸ್ತುಗಳಾಗಿವೆ. ಇದನ್ನು ತಪ್ಪಿಸಬೇಕಾದರೆ ಗ್ರಾಮೀಣ ಕ್ರೀಡೆಗಳ ಸೊಬಗನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಅವರು ಹೇಳಿದರು.

ನಗರದ 198 ವಾರ್ಡುಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಈ ಗ್ರಾಮೀಣ ಆಟಗಳು ಒಬ್ಬರಿಂದ ಒಬ್ಬರಿಗೆ ನಿರಂತರವಾಗಿ ಸಾಗುತ್ತಿರಲಿ. ಗ್ರಾಮೀಣ ಕ್ರೀಡೆಗಳ ಮೂಲಕವಾದರು ನಗರದ ಮಕ್ಕಳಿಗೆ ಗ್ರಾಮೀಣ ಸಂಸ್ಕೃತಿ ಪರಿಚಯವಾಗಲಿ ಎಂದು ಅವರು ಆಶಿಸಿದರು.

ಗ್ರಾಮೀಣ ಕ್ರೀಡಾಕೂಟದಲ್ಲಿ ಮೇಯರ್ ಪದ್ಮಾವತಿ ಶಾಲಾ ಮಕ್ಕಳೊಂದಿಗೆ ಹಗ್ಗ-ಜಗ್ಗಾಟ, ಬುಗುರಿ ಆಟವಾಡಿದರು. ಇಡೀ ಮೈದಾನ ಮಕ್ಕಳ ಕಲರವದಿಂದ ತುಂಬಿತ್ತು. ಮಕ್ಕಳು ತಮಗೆ ಇಷ್ಟವಾದ ಆಟವನ್ನು ಆಡುವ ಮೂಲಕ ಪುಲಕಗೊಂಡರು. ಆಟದಲ್ಲಿ ಬಿದ್ದು, ಎದ್ದು ತಮಗೇನು ಆಗಿಲ್ಲದಂತೆ ಪುನಃ ಆಟದಲ್ಲಿ ತೊಡಗಿಕೊಂಡು ಸಂತಸಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News