ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ 7 ಮಂದಿ ಜೆಡಿಎಸ್ ಶಾಸಕರು: ಝಮೀರ್ ಅಹ್ಮದ್
ಬೆಂಗಳೂರು, ಆ.11: ಜೆಡಿಎಸ್‌ನಿಂದ ಅಮಾನತ್ತುಗೊಂಡಿರುವ ಏಳು ಮಂದಿ ಬಂಡಾಯ ಶಾಸಕರು 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರನ್ನು ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೆ ಹೊಸದಿಲ್ಲಿಗೆ ಭೇಟಿ ನೀಡಿ ಕಾಂಗ್ರೆಸ್ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ. ಆ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲಿಗರೊಂದಿಗೆ ಏಳು ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದೇವೆ. ಆದರೆ, ರಾಯಚೂರಿನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಂಧನಕ್ಕೆ ಸೂಚನೆ: ತನ್ನ ಹೆಸರನ್ನು ಬಳಸಿ ಮಹಿಳೆಯೊಬ್ಬರು ಜನರಿಗೆ ವಂಚಿಸಿರುವ ಪ್ರಕರಣ ಸಂಬಂಧ ಕೂಡಲೇ ತಪ್ಪಿತಸ್ಥೆಯನ್ನು ಬಂಧಿಸಲು ಈಗಾಗಲೇ ಪೊಲೀಸರಿಗೆ ಸೂಚಿಸಿದ್ದೇನೆ. ಈ ಸಂಬಂಧ ಶೀಘ್ರದಲ್ಲೆ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡುತ್ತೇನೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
"ಆ ಮಹಿಳೆ ಯಾರೆಂಬುದೇ ನನಗೆ ಗೊತ್ತಿಲ್ಲ. ಆಕೆಯ ಪರಿಚಯವೂ ಇಲ್ಲ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ" ಎಂದ ಅವರು, ಜನ ಸಾಮಾನ್ಯರು ಶಾಸಕರ ಹೆಸರು ಹೇಳಿದ ಕೂಡಲೇ ಗೊತ್ತಿಲ್ಲದ ವ್ಯಕ್ತಿಗಳಿಗೆ ಹಣ ನೀಡುವ ಮೊದಲು ಯೋಚಿಸಬೇಕು. ಯಾವುದೇ ಕಾರಣಕ್ಕೂ ವಂಚನೆಗೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ರಾಜಕೀಯ ಸಲ್ಲ: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುವುದಕ್ಕೆ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಚುಂಚನಗಿರಿ ಮಠ ಯಾವುದೇ ವ್ಯಕ್ತಿ ಮತ್ತು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲ ಪಕ್ಷದ ಮುಖಂಡರು ಮಠಕ್ಕೆ ಭೇಟಿ ನೀಡುತ್ತಿದ್ದು, ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಶಾಸಕ ಚಲುವರಾಯ ಸ್ವಾಮಿ ಸ್ಪಷ್ಟಪಡಿಸಿದರು.
ಲಿಂಗಾಯತ ಧರ್ಮದ ಮಾದರಿಯಲ್ಲೆ ಒಕ್ಕಲಿಗರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ಕಲ್ಪಿಸುವ ಸಂಬಂಧ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಹಿರಿಯ ಸಾಹಿತಿಗಳು ಹಾಗೂ ಸಮುದಾಯದ ಗಣ್ಯರು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ಮಂಡ್ಯ ಜಿಲ್ಲೆ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದಲೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದೇನೆ. ಈ ಬಗ್ಗೆ ಅನುಮಾನ ಬೇಡ. ತಾನು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂಬುದು ಸತ್ಯಕ್ಕೆ ದೂರ’
-ಎನ್.ಚಲುವರಾಯಸ್ವಾಮಿ, ಜೆಡಿಎಸ್ ಬಂಡಾಯ ಶಾಸಕ