×
Ad

ಶೇ.50ರಷ್ಟು ಬಿಜೆಪಿ ಅಭ್ಯರ್ಥಿಗಳು ಭ್ರಷ್ಟರು: ಅಮಿತ್ ಶಾಗೆ ಪ್ರಮೋದ್ ಮುತಾಲಿಕ್ ಪತ್ರ

Update: 2017-08-11 18:10 IST

ಬೆಂಗಳೂರು, ಆ.11: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಾಕಾಂಕ್ಷಿಗಳಾಗಿರುವ ಶೇ.50ರಷ್ಟು ಬಿಜೆಪಿ ಅಭ್ಯರ್ಥಿಗಳು ಭ್ರಷ್ಟರಾಗಿದ್ದಾರೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ರಾಜ್ಯದ ಜನತೆ ಬಿಜೆಪಿಗೆ ಸರಕಾರ ರಚಿಸಲು ಒಂದು ಅವಕಾಶ ನೀಡಿದ್ದರು. ಈ ಅವಕಾಶವನ್ನು ಜನಪರವಾಗಿ ಉಪಯೋಗಿಸಬೇಕಾಗಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್ 50 ವರ್ಷದಲ್ಲಿ ಮಾಡಿದ ಭ್ರಷ್ಟಾಚಾರವನ್ನು ಕೇವಲ 5 ವರ್ಷದಲ್ಲಿ ಮಾಡಿ ಮುಗಿಸಿದ್ದರು. ಹೀಗಾಗಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.

ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆಸಿದ ನಾಯಕರೇ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಇಂತಹ ಭ್ರಷ್ಟಾಚಾರಿ, ಜನವಿರೋಧಿ ನಾಯಕರಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ಜನರ ಹಿತವನ್ನು ಕಾಪಾಡಲು ಸಾಧ್ಯವಿಲ್ಲವೆಂದು ಪ್ರಮೋದ್ ಮುತಾಲಿಕ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಬರೆದಿರುವ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಬಿಜೆಪಿಯಲ್ಲಿರುವ ಬಹುತೇಕರು ಭ್ರಷ್ಟರಾಗಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದಾಗಿದೆ. ಇತ್ತೀಚಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಅಪಾರ ಸಂಪತ್ತನ್ನು ವಶಪಡಿಸಿಕೊಂಡರು. ಈ ಬಗ್ಗೆ ರಾಜ್ಯದ ಬಿಜೆಪಿಯ ಯಾವ ನಾಯಕರೂ ಮಾತನಾಡಿಲ್ಲ. ಆ ಮೂಲಕ ತಾವು ಭ್ರಷ್ಟಾಚಾರಿಗಳ ಪರವಾಗಿದ್ದೇವೆ ಎಂದು ಸಾಬೀತುಪಡಿಸಿದ್ದಾರೆ.

ಹೀಗೆ ಪ್ರಸ್ತುತ ರಾಜ್ಯದಲ್ಲಿರುವ ಬಿಜೆಪಿ ನಾಯಕರ ಭ್ರಷ್ಟಾಚಾರ, ಅನೀತಿಗಳ ಪಟ್ಟಿ ಮಾಡುತ್ತಾ ಹೋಗಬಹುದು. ಇಂತಹ ನಾಯಕರಿಂದ ಬಿಜೆಪಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹೀಗಾಗಿ ಶೇ.50ಕ್ಕಿಂತ ಹೆಚ್ಚು ಬಿಜೆಪಿ ನಾಯಕರನ್ನು ಬದಲಾಯಿಸುವ ಅಗತ್ಯವಿದೆ. ಈ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗಮನ ಹರಿಸಬೇಕು ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News