×
Ad

ಅನುದಾನ ತಲುಪಿಸುವುದು ಅಧಿಕಾರಿಗಳ ಕರ್ತವ್ಯ: ಎಂ.ನಾರಾಯಣಸ್ವಾಮಿ

Update: 2017-08-11 19:15 IST

ಬೆಂಗಳೂರು, ಆ.12: ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ಅಲ್ಲದೆ, ಸರಕಾರದ ಅನುದಾನಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಹೇಳಿದ್ದಾರೆ.ಶುಕ್ರವಾರ ಬೆಂ.ಉತ್ತರ ತಾಲೂಕಿನ ಅರಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರಕಾರ ಯಥೇಚ್ಛವಾಗಿ ಅನುದಾನ ನೀಡುತ್ತಿದ್ದು, ಅದನ್ನು ಸದ್ಬಳಕೆ ಮಾಡಲು ಅಧಿಕಾರಿಗಳು ಶ್ರಮಿಸಬೇಕೆಂದು ತಿಳಿಸಿದರು.


ಅಧಿಕಾರಿಗಳಿಗೆ ತರಾಟೆ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಇಪ್ಪತ್ತೊಂಬತ್ತು ಇಲಾಖೆಗಳು ಒಳಪಡುತ್ತವೆ. ಆದರೆ, ಗ್ರಾಮಸಭೆಗೆ ಕೇವಲ 10 ಇಲಾಖೆಗಳ ಅಧಿಕಾರಿಗಳು ಮಾತ್ರ ಹಾಜರಾಗಿದ್ದು, ಇನ್ನುಳಿದಂತೆ ಹತ್ತೊಂಬತ್ತು ಇಲಾಖೆ ಅಧಿಕಾರಿಗಳು ಗೈರಾಗಿರುವುದನ್ನು ಗಮನಿಸಿ ನಾರಾಯಣ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೀರಾ ಎಂದು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಥ್ ರೆಡ್ಡಿ ಅವರಿಗೆ ನಾರಾಯಣಸ್ವಾಮಿ ಪ್ರಶ್ನಿಸಿದರು, ಪ್ರಶ್ನೆಯಿಂದಾಗಿ ಗಲಿಬಿಲಿಗೊಂಡ ಅಶ್ವತ್ಥ್ ರೆಡ್ಡಿ, ಹೌದು ಸರ್, ಎಲ್ಲರಿಗೂ ಮಾಹಿತಿ ನೀಡಿರುವುದಾಗಿ ಉತ್ತರಿಸಿದರು. ಸಭೆಗೆ ಗೈರಾಗಿರುವ ಅಧಿಕಾರಿಗಳನ್ನು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು, ಕುಡಿಯುವ ನೀರು, ಒಳಚರಂಡಿ ಹದಗೆಟ್ಟಿರುವ ಸಮಸ್ಯೆ, ಡೆಂಗ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಡೆಂಗ್ ಪ್ರಕರಣಗಳು ಇರುವ ಕಡೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಡೆಂಗ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಹೇಳಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಸದಸ್ಯರಾದ ಕೆ.ಬಿ.ಮಹದೇವಯ್ಯ, ಲೋಕೇಶ್, ಮಂಜುನಾಥ್, ಪ್ರಕಾಶ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News