ಬೆಲ್ಜಿಯಂ ವಿರುದ್ಧ ಭಾರತಕ್ಕೆ ಸತತ ಸೋಲು

Update: 2017-08-11 18:34 GMT

ಬ್ರಸೆಲ್ಸ್, ಆ.11: ಯುರೋಪ್ ಪ್ರವಾಸದಲ್ಲಿರುವ ಭಾರತದ ಪುರುಷರ ಹಾಕಿ ತಂಡ ಆತಿಥೇಯ ಬೆಲ್ಜಿಯಂ ವಿರುದ್ಧ ಸತತ ಎರಡನೆ ಸೋಲು ಅನುಭವಿಸಿದೆ.

 ಗುರುವಾರ ನಡೆದ ಬೆಲ್ಜಿಯಂ ವಿರುದ್ಧದ ತನ್ನ ಎರಡನೆ ಪಂದ್ಯದಲ್ಲಿ ಭಾರತ ತಂಡ 1-3 ಅಂತರದಿಂದ ಶರಣಾಗಿದೆ.ಬುಧವಾರ ನಡೆದ ಬೆಲ್ಜಿಯಂ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಏಕೈಕ ಗೋಲಿನ ಅಂತರದಿಂದ ಸೋತಿತ್ತು.

ಆಟ ಆರಂಭವಾಗಿ ಮೊದಲ ಕೆಲವು ನಿಮಿಷಗಳಲ್ಲಿ ಯುವ ಗೋಲ್‌ಕೀಪರ್ ಸೂರಜ್ ಕರ್ಕೇರ ಅತ್ಯುತ್ತಮ ಕೀಪಿಂಗ್‌ನ ಮೂಲಕ ಬೆಲ್ಜಿಯಂಗೆ ಗೋಲು ನಿರಾಕರಿಸಿದ್ದರು. ಭಾರತ ಆರು ಹೊಸ ಆಟಗಾರರನ್ನು ಕಣಕ್ಕಿಳಿಸಿತ್ತು. ಆರನೆ ನಿಮಿಷದಲ್ಲಿ ಅರ್ಮಾನ್ ಖುರೇಶಿ ಬಾರಿಸಿದ ಗೋಲಿನ ನೆರವಿನಿಂದ ಭಾರತ 1-0 ಮುನ್ನಡೆ ಸಾಧಿಸಿತ್ತು.

ಭಾರತದ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. 9ನೆ ನಿಮಿಷದಲ್ಲಿ ಗೋಲು ಬಾರಿಸಿದ ಬೆಲ್ಜಿಯಂನ ಅವೌರಿ ಕೆಸ್ಟರ್ಸ್‌ 1-1 ರಿಂದ ಸಮಬಲ ಸಾಧಿಸಿದರು. ಎರಡನೆ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಹಲವು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದವು. ಆದರೆ, ಭಾರತ ತನಗೆ ಲಭಿಸಿದ ಅವಕಾಶವನ್ನು ಕೈಚೆಲ್ಲಿತು. ಬೆಲ್ಜಿಯಂನ ಲೊಕ್ ಲುಪಾರ್ಟ್ 21ನೆ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 2-1ಗೆ ಹೆಚ್ಚಿಸಿದರು.

ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ಗೋಲು ಬಾರಿಸಲು ಯತ್ನಿಸಿತು. ಆದರೆ ಬೆಲ್ಜಿಯಂನ ಗೋಲ್‌ಕೀಪರ್ ವ್ಯಾನಾಸ್ಕ್ ಭಾರತದ ಮನ್‌ದೀಪ್, ಖುರೇಶಿ ಹಾಗೂ ರಮಣ್‌ದೀಪ್ ಸಿಂಗ್ ಪ್ರಯತ್ನವನ್ನು ವಿಫಲಗೊಳಿಸಿದರು.

ಮೊದಲಾರ್ಧ ಕೊನೆಗೊಳ್ಳಲು ಕೆಲವೇ ನಿಮಿಷಗಳಿರುವಾಗ ಬೆಲ್ಜಿಯಂನ ಸೆಡ್ರಿಕ್ ಚಾರ್ಲರ್ ತಂಡದ ಮುನ್ನಡೆಯನ್ನು 3-1ಕ್ಕೆ ವಿಸ್ತರಿಸಿದರು.
ಭಾರತ ತಂಡ ಹಾಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದು, ಆಗಸ್ಟ್ 13 ಹಾಗೂ 14 ರಂದು ನಡೆಯಲಿರುವ ಪಂದ್ಯದಲ್ಲಿ ಹಾಲೆಂಡ್‌ನ್ನು ಎದುರಿಸಲಿದೆ. ಆ.16ರಂದು ಆಸ್ಟ್ರೀಯ ತಂಡವನ್ನು ಎದುರಿಸುವ ಮೂಲಕ ಯುರೋಪ್‌ನ ಐದು ಪಂದ್ಯಗಳ ಪ್ರವಾಸವನ್ನು ಕೊನೆಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News