ಕಾಂಗ್ರೆಸ್‌ನಲ್ಲಿ ಯೂಥ್ ವರ್ಸಸ್ ಓಲ್ಡ್ ಚರ್ಚೆಗೆ ಮರುಜೀವ

Update: 2017-08-12 03:53 GMT

ಹೊಸದಿಲ್ಲಿ, ಆ.12: ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್, ಬಿಜೆಪಿಯ ಎಲ್ಲ ತಂತ್ರಗಾರಿಕೆಯನ್ನು ಸೋಲಿಸಿ ಗೆಲುವಿನ ನಗೆ ಬೀರಿರುವುದು ಕಾಂಗ್ರೆಸ್ ಪಕ್ಷದಲ್ಲಿ ’ಬಿಸಿರಕ್ತ’ ಮತ್ತು 'ಹಳೆಹುಲಿ'ಗಳ ಬಗೆಗಿನ ಚರ್ಚೆಗೆ ಕಾರಣವಾಗಿದೆ.

ರಾಹುಲ್ ಗಾಂಧಿಯವರನ್ನು ಪಕ್ಷದ ಯುವರಾಜ ಎಂದೇ ಬಿಂಬಿಸಲಾಗಿದ್ದು, ಅವರು ಪಕ್ಷದ ಅತ್ಯುನ್ನತ ಹುದ್ದೆಗೆ ಏರಿದರೆ ಯುವ ಸಮುದಾಯವನ್ನು ಆಕರ್ಷಿಸಬಹುದು ಎಂಬ ಲೆಕ್ಕಾಚಾರಕ್ಕೆ ಸಹಜವಾಗಿಯೇ ಪಕ್ಷದ ಹಿರಿ ತಲೆಗಳಿಂದ ಅಸಮಾಧಾನ ವ್ಯಕ್ತವಾಗಿದೆ. ಇದೀಗ ಗುಜರಾತ್‌ನಲ್ಲಿ ಅಹ್ಮದ್ ಪಟೇಲ್ ವಿಜಯ, ಪಕ್ಷದಲ್ಲಿ ಅನುಭವಿಗಳ ಮಹತ್ವವನ್ನು ಎತ್ತಿಹಿಡಿದಿದೆ. ಕೇಸರಿ ಪೈಪೋಟಿಗೆ ತಕ್ಕ ಉತ್ತರ ನೀಡಬೇಕಾದರೆ ಅನುಭವಿಗಳ ಕಾರ್ಯತಂತ್ರ ಅನಿವಾರ್ಯ ಎಂಬ ವಾದ ಒಂದು ವಲಯದ್ದು. 2014ರ ಹೀನಾಯ ಸೋಲಿನ ಬಳಿಕ ಪಕ್ಷದಲ್ಲಿ ಯಂಗ್ ವರ್ಸಸ್ ಓಲ್ಡ್ ಸಂಘರ್ಷ ಆರಂಭವಾಗಿತ್ತು. ಅಹ್ಮದ್ ಪಟೇಲ್ ಗೆದ್ದಾಗ ರಾಹುಲ್‌ ಗಾಂಧಿ ಕನಿಷ್ಠ ಅವರನ್ನು ಅಭಿನಂದಿಸುವ ಟ್ವೀಟ್ ಕೂಡಾ ಮಾಡದಿರುವುದು ಈ ಸಂಘರ್ಷಕ್ಕೆ ಸಾಕ್ಷಿ.

ರಾಹುಲ್ ಆಯ್ಕೆಯನ್ನು ವೈಯಕ್ತಿಕವಾಗಿ ಹಾಗೂ ಅವರ ಸಿದ್ಧಾಂತಗಳ ನೆಲೆಯಲ್ಲಿ ಹಿರಿಯರು ವಿರೋಧಿಸುತ್ತಲೇ ಬಂದಿದ್ದಾರೆ. ಯುವಕರಿಗೆ ಮಣೆ ಹಾಕುವ ಸಲುವಾಗಿ ಹಿರಿಯರನ್ನು ಕಡೆಗಣಿಸಲಾಗದು ಎನ್ನುವುದು ಅವರ ವಾದ. ಗುಜರಾತ್ ರಾಜ್ಯಸಭಾ ಚುನಾವಣೆಯ ಫಲಿತಾಂಶ ಈ ವಾದಕ್ಕೆ ಪುಷ್ಟಿ ನೀಡಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಜತೆಗೆ ಪಕ್ಷವು ಹೊಸ ಚಿಗುರು- ಹಳೆ ಬೇರು ಎಂಬ ಮಧ್ಯಪಥವನ್ನು ಅನುಸರಿಸುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News