ಮದ್ರಸಗಳಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಆದೇಶ

Update: 2017-08-12 04:04 GMT

ಭೋಪಾಲ್, ಆ.12: ಉತ್ತರ ಪ್ರದೇಶದ ಮದ್ರಸ ಶಿಕ್ಷಾ ಪರಿಷತ್‌ನ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಮಧ್ಯಪ್ರದೇಶದ ಮದ್ರಸ ಮಂಡಳಿ, ರಾಜ್ಯದ ಎಲ್ಲ 256 ಮದ್ರಸಗಳಲ್ಲಿ ಆಗಸ್ಟ್ 15ರಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟಗೀತೆ ಹಾಡುವುದನ್ನು ಕಡ್ಡಾಯಪಡಿಸಿ ಆದೇಶ ಹೊರಡಿಸಿದೆ.

ಯುವಕರು ಈ ಆದೇಶವನ್ನು ಪಾಲಿಸಿ, ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಕುರಿತ ವೀಡಿಯೊ ದಾಖಲೆ ಮತ್ತು ಛಾಯಾಚಿತ್ರವನ್ನು ಮಂಡಳಿಯ ಅಧ್ಯಕ್ಷರಿಗೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಅಂದು ಎಲ್ಲ ವಿದ್ಯಾರ್ಥಿಗಳು ತಿರಂಗ ರ್ಯಾಲಿ ನಡೆಸುವಂತೆಯೂ ಮಂಡಳಿ ಸೂಚಿಸಿದೆ.

"ಇದು ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳುವ ಸಂಬಂಧ ಹೊರಡಿಸಿದ ಮಾಮೂಲಿ ಆದೇಶ. ರಾಷ್ಟ್ರ ಧ್ವಜಾರೋಹಣ ನೆರವೇರಿಸಿದಾಗ, ರಾಷ್ಟ್ರಗೀತೆ ಹಾಡುವಂತೆ ಸೂಚಿಸಲಾಗಿದೆ" ಎಂದು ಮದ್ರಸ ಮಂಡಳಿಯ ಅಧ್ಯಕ್ಷ ಸೈಯದ್ ಇಮದುದ್ದೀನ್ ಹೇಳಿದ್ದಾರೆ.

"ನೈಜ ಮುಸ್ಲಿಂ ಮತ್ತು ಇಸ್ಲಾಂ ಅನುಯಾಯಿ ತನ್ನ ದೇಶದ ಬಗ್ಗೆ ಪ್ರೀತಿ ಹೊಂದಿರಬೇಕು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮುನ್ನ ಉತ್ತರ ಪ್ರದೇಶ ಮದ್ರಸ ಮಂಡಳಿ ಕೂಡಾ ಇಂಥದ್ದೇ ಆದೇಶ ಹೊರಡಿಸಿತ್ತು. 8 ಗಂಟೆಗೆ ಈ ಸಮಾರಂಭ ಆಯೋಜಿಸಿ, ಸಮಾರಂಭದ ಬಳಿಕ ದೇಶದ ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸುವಂತೆಯೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News