×
Ad

ಅಂಗಾಂಗ ದಾನ ಕುರಿತು ಜಾಗೃತಿ ಅಭಿಯಾನ

Update: 2017-08-12 18:12 IST

ಬೆಂಗಳೂರು, ಆ.12: ರಾಷ್ಟ್ರೀಯ ಅಂಗ ದಾನ ದಿನದ ಅಂಗವಾಗಿ ‘ಅಂಗಾಂಗ ದಾನ ಮಾಡುವ ಮೂಲಕ ಜೀವ ಉಳಿಸಿ’ ಎಂಬ ವಿಶೇಷ ಅಭಿಯಾನಕ್ಕೆ ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ಯಂಗ್ ಇಂಡಿಯನ್ಸ್ ಸಂಸ್ಥೆ ಮುಂದಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ.ಕೌಶಿಕ್ ಮುರಳಿ, ಅಂಗಾಂಗಗಳ ದಾನದ ಹಿಂದೆ ಹರಡಿಕೊಂಡಿರುವ ಭ್ರಮೆಗಳಿಂದಾಗಿ ವಾರ್ಷಿಕವಾಗಿ ಭಾರತದಲ್ಲಿ ಸುಮಾರು 5 ಲಕ್ಷ ಜನರು ಅಂಗಾಂಗಗಳ ಕೊರತೆಯಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ದಾನ ಮಾಡುವ ವಿಚಾರದಲ್ಲಿ ಯಾವುದೇ ಪೂರ್ವಗ್ರಹವಿಲ್ಲದೆ ಅಂಗಾಂಗಗಳನ್ನು ದಾನ ಮಾಡಿ ಮರು ಜೀವ ನೀಡಲು ಮುಂದಾಗಬೇಕಿದೆ ಎಂದರು.

ಭಾರತದಲ್ಲಿ 2016 ರ ನಂತರ ಒಂದು ಮಿಲಿಯನ್ ಜನಸಂಖ್ಯೆ ಪೈಕಿ ಕೇವಲ ಶೇ.8 ರಷ್ಟು ಜನರು ಮಾತ್ರ ಅಂಗಾಂಗ ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಆದರೆ, ನಮ್ಮ ನೆರೆ ರಾಷ್ಟ್ರಗಳಲ್ಲಿ ಒಂದು ಮಿಲಿಯನ್‌ಗೆ ಸರಾಸರಿ ಶೇ.36 ರಷ್ಟು ಜನರು ಅಂಗಾಂಗ ದಾನ ಮಾಡುತ್ತಿದ್ದಾರೆ. ಹೀಗಾಗಿ ನಾವು ಸ್ವಾರ್ಥದ ಜೀವನದಿಂದ ಹೊರ ಬಂದು ಮಾನವೀಯತೆಯನ್ನು ಅಳವಡಿಸಿಕೊಂಡಾಗ ಇನ್ನೊಬ್ಬರಿಗೆ ಜೀವ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಶಂಕರ ಕಣ್ಣಿನ ಆಸ್ಪತ್ರೆ, ಕೊಲಂಬಿಯಾ ಏಶಿಯಾ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ, ಸಕ್ರ ಕಣ್ಣಿನ ಆಸ್ಪತ್ರೆ, ಅಪೋಲೊ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ, ಸಕ್ರ ವರ್ಲ್ಡ್ ಆಸ್ಪತ್ರೆ ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳ, ಎನ್‌ಜಿಒಗಳ ಸಹಯೋಗದೊಂದಿಗೆ ಅಭಿಯಾನ ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಕಣ್ಣಿನ ಶಸ್ತ್ರಚಿಕಿತ್ಸೆ ಪಡೆದ ಯುವತಿ ಉಷಾ ಮಾತನಾಡಿ, ಕಣ್ಣಿನ ರಾಚನಿಕ ದೋಷದಿಂದ ಅಂಧತ್ವದತ್ತ ಕಳೆದು ಹೋಗಿದ್ದೆ. ಕಲಿಯುವ ಆಸೆಯಿದ್ದರೂ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ನನಗೆ ಕಣ್ಣನ್ನು ದಾನ ಮಾಡುವ ಮೂಲಕ ಮರು ಜನ್ಮ ನೀಡಿದಂತಾಗಿದೆ. ಈಗ ಎಲ್ಲವನ್ನೂ ಸುಲಭವಾಗಿ ಓದುತ್ತಿದ್ದೇನೆ. ಬರೆಯುತ್ತಿದ್ದೇನೆ. ಈಗ ಉನ್ನತ ಶಿಕ್ಷಣ ಮಾಡಬೇಕು, ಬಿಎಡ್ ಮಾಡಿಕೊಂಡು ಶಿಕ್ಷಕಿಯಾಗಬೇಕು ಎಂಬ ಆಸೆಯಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಆಸ್ಪತ್ರೆಗಳ ವೈದ್ಯರಾದ ಡಾ.ಎ.ಓಲಿತ್ ಸೆಲ್ವನ್, ಡಾ.ಕಿಶೋರ್, ಡಾ.ಸುಷ್ಮಾರಾಣಿ ರಾಜು, ಡಾ.ಆನಂದ್ ಬಾಲಸುಬ್ರಮಣಿಯಂ, ಡಾ.ಎಚ್.ಎಂ.ಮಲ್ಲಿಕಾರ್ಜುನ, ಡಾ.ಸಂಜಯ್, ಡಾ.ಕಾರ್ತಿಕ್‌ರಾವ್, ಡಾ.ಕೌಶಿಕ್ ಮುರಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News