101 ಇಂದಿರಾ ಕ್ಯಾಂಟಿನ್ ಆ.16ಕ್ಕೆ ಲೋಕಾರ್ಪಣೆ: ಮೇಯರ್ ಪದ್ಮಾವತಿ
ಬೆಂಗಳೂರು, ಆ. 12: ನಗರದ ಜನರಿಗೆ ಅಗ್ಗದ ದರದಲ್ಲಿ ಉಪಾಹಾರ, ಊಟ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟಿನ್’ ಯೋಜನೆಗೆ ಆ.16ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ ಎಂದು ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯನಗರ ವಾರ್ಡ್‌ನ ಕನಕನಪಾಳ್ಯದಲ್ಲಿ ನಿರ್ಮಿಸಿರುವ ಕ್ಯಾಂಟಿನ್ ಉದ್ಘಾಟಿಸುವ ಮೂಲಕ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಲಿದ್ದು, ಸಿಎಂ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇನ್ನಿತರ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
101 ಕ್ಯಾಂಟಿನ್ ಲೋಕಾರ್ಪಣೆ: ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಕ್ಯಾಂಟಿನ್ ನಿರ್ಮಿಸಲು ನಿರ್ಧರಿಸಿದ್ದು, ಈಗಾಗಲೇ 86 ಕ್ಯಾಂಟಿನ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 20 ಕ್ಯಾಂಟಿನ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಆ.16ರಂದು 101 ಕ್ಯಾಂಟಿನ್‌ಗಳ ಲೋಕಾರ್ಪಣೆ ಮಾಡಲಾಗುವುದು ಎಂದರು.
ಉಳಿದ ಕ್ಯಾಂಟಿನ್‌ಗಳನ್ನು ಅ.2ರ ಗಾಂಧಿ ಜಯಂತಿಯ ದಿನ ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಪಾಲಿಕೆಯ 110 ಸ್ವತ್ತುಗಳಲ್ಲದೆ, ಸರಕಾರದ ವಿವಿಧ ಇಲಾಖೆಗೆ ಸೇರಿದ ನಿವೇಶನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಆಹಾರ ತಯಾರಿಸುವುದು ಮತ್ತು ಕ್ಯಾಂಟಿನ್‌ಗಳಿಗೆ ಸರಬರಾಜು ಮಾಡುವ ಹೊಣೆಯನ್ನು ರಿವಾರ್ಡ್(12 ಕ್ಷೇತ್ರಗಳು), ಚೇಫ್ ಟಾಕ್(15 ಕ್ಷೇತ್ರಗಳು) ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದ ಅವರು, ಉಪಾಹಾರ ಮತ್ತು ಊಟಕ್ಕೆ ಸರಕಾರದಿಂದ 32ರೂ.ಗಳನ್ನು ಭರಿಸಲಾಗುತ್ತದೆ. 9.50ರೂ.ಉಪಾಹಾರಕ್ಕೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 11.25 ರೂ.ಗಳನ್ನು ನೀಡಲಾಗುತ್ತಿದೆ ಎಂದರು.
ಕ್ಯಾಂಟಿನ್‌ಗಳಿಗೆ ಸಿದ್ಧ ಆಹಾರ ಸರಬರಾಜು ಮಾಡುವ ಅಡುಗೆ ಕೋಣೆಗಳ ನಿರ್ಮಾಣ ಕಾರ್ಯ 13 ಕಡೆ ಪ್ರಗತಿಯಲ್ಲಿದೆ. ಒಂದು ಅಡುಗೆ ಕೋಣೆಯಲ್ಲಿ 15 ರಿಂದ 18 ಮಂದಿ ಸಿಬ್ಬಂದಿ ಆಹಾರ ತಯಾರಿಕೆ ಮಾಡಲಿದ್ದಾರೆ. ಕ್ಯಾಂಟಿನ್‌ನಲ್ಲಿ ಕ್ಯಾಷಿಯರ್, ಸೂಪರ್ ವೈಸರ್, ವಾಚ್‌ಮೆನ್, ಸಪ್ಲೈಯರ್ ಮತ್ತು ಕ್ಲೀನರ್ ಸೇರಿ ಏಳು ಮಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಒಂದು ಅಡುಗೆ ಕೋಣೆಯಲ್ಲಿ 6ಸಾವಿರ ಜನರಿಗೆ ಆಹಾರ ತಯಾರಿಸಬಹುದು. ಒಂದು ಕ್ಯಾಂಟಿನ್‌ನಲ್ಲಿ ದಿನಕ್ಕೆ 500ಕ್ಕೂ ಹೆಚ್ಚು ಜನರಿಗೆ ಊಟ ಮತ್ತು ಉಪಾಹಾರ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದ ಅವರು, ಜನರಿಗೆ ಅನುಕೂಲ ಆಗುವ ಯೋಜನೆಗೆ ವಿರೋಧ ಸರಿಯಲ್ಲ ಎಂದು ಆಕ್ಷೇಪಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,187 ಉದ್ಯಾನವನಗಳು, 287 ಆಟದ ಮೈದಾನಗಳು, 227 ಇನ್ನಿತರ ಜಾಗಗಳಿವೆ. ಆ ಪೈಕಿ ಪಾರ್ಕ್, ವೆೆುದಾನಕ್ಕೆ ಮೀಸಲಿಟ್ಟ ಜಾಗಗಳಲ್ಲಿ ಇಂದಿರಾ ಕ್ಯಾಂಟನ್ ನಿರ್ಮಿಸಿಲ್ಲ. ಯಾವುದೇ ರೀತಿಯಲ್ಲಿಯೂ ಕಾನೂನು ಉಲ್ಲಂಘಿಸಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದರು.
ಸಾರ್ವಜನಿಕರು ಕಸ ಹಾಕುತ್ತಿದ್ದ ಜಾಗಗಳನ್ನು ಗುರುತಿಸಿ ಅಂತಹ ಪ್ರದೇಶದಲ್ಲಿ ಕ್ಯಾಂಟಿನ್ ನಿರ್ಮಿಸಲಾಗಿದೆ. ಮರ್ಫಿಟೌನ್ ಗ್ರಂಥಾಲಯದ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಹೀಗಾಗಿ ಆ ಜಾಗವನ್ನು ವಶಕ್ಕೆ ಪಡೆದು ಕ್ಯಾಂಟಿನ್ ನಿರ್ಮಾಣ ಮಾಡಲಾಗಿದೆ ಎಂದರು.
ಮಾಹಿತಿಗೆ ಆ್ಯಪ್: ‘ಕ್ಯಾಂಟಿನ್‌ನ ಆಹಾರದ ಗುಣಮಟ್ಟ-ಶುಚಿತ್ವಕ್ಕೆ ಆದ್ಯತೆ ನೀಡಿದ್ದು, ಕ್ಯಾಂಟಿನ್‌ಗಳ ಮಾಹಿತಿಗೆ ‘ಆ್ಯಪ್’ ಸಿದ್ಧಪಡಿಸಲಾಗಿದ್ದು, ಬಿಡುಗಡೆ ಮಾಡಲಾಗುವುದು. ಆ್ಯಪ್‌ನಲ್ಲಿ ಕ್ಯಾಂಟಿನ್ ಮಾಹಿತಿ ಮತ್ತು ಆಯಾ ದಿನಗಳ ಮೆನು ಇರಲಿದೆ. ಇಂದಿರಾ ಕ್ಯಾಂಟಿನ್ ಮುಂದೆ ನಿಂತು ಸ್ವಂತಿ(ಸೆಲ್ಫಿ) ಕ್ಲಿಕ್ಕಿಸಿ ಕಳುಹಿಸಿದರೆ, ಉತ್ತಮ ಫೋಟೊಗಳಿಗೆ 1ಲಕ್ಷ ರೂ.ಬಹುಮಾನ ನೀಡಲಾಗುವುದು’
-ಮಂಜುನಾಥ ಪ್ರಸಾದ್ ಬಿಬಿಎಂಪಿ ಆಯುಕ್ತ
ವೇಳಾಪಟ್ಟಿ:‘ಬೆಳಗ್ಗೆ 7.30ರಿಂದ 10.30ರ ವರೆಗೆ ಉಪಾಹಾರ, ಮಧ್ಯಾಹ್ನ 12.30ರಿಂದ 2.30ರ ವರೆಗೆ ಮಧ್ಯಾಹ್ನದ ಊಟ, ರಾತ್ರಿ 7.30ರಿಂದ 8.30ರ ವರೆಗೆ ರಾತ್ರಿ ಊಟ ಲಭ್ಯ. ಆಯಾ ಕ್ಯಾಂಟಿನ್‌ಗಳಲ್ಲಿ ಎಷ್ಟು ಜನರಿಗೆ ಊಟ ಲಭ್ಯವಿದೆ ಎಂಬ ಮಾಹಿತಿ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಪ್ರಕಟಿಸಲಾಗುವುದು. ಆಹಾರದ ಸುರಕ್ಷತೆಗಾಗಿ ಆರೋಗ್ಯಾಧಿಕಾರಿ ನೇಮಕದ ಜೊತೆಗೆ ಕ್ಯಾಂಟಿನ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ’