ದರ್ಗಾದಲ್ಲಿ ಚಾದರ್ ಸಮರ್ಪಿಸಿದ ಝಮೀರ್‌ಅಹ್ಮದ್
ಬೆಂಗಳೂರು, ಆ.12: ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯ ರಾಜಕೀಯ ಕಾರ್ಯದರ್ಶಿ ಅಹ್ಮದ್‌ಪಟೇಲ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ನಗರದ ಹಝ್ರತ್ ತವಕ್ಕಲ್‌ಮಸ್ತಾನ್ ದರ್ಗಾದಲ್ಲಿ ಜೆಡಿಎಸ್ ಬಂಡಾಯ ಶಾಸಕ ಝಮೀರ್‌ಅಹ್ಮದ್‌ಖಾನ್ ಚಾದರ್ ಸಮರ್ಪಿಸಿದರು.
ಅಹ್ಮದ್‌ಪಟೇಲ್ ಗೆಲುವು ಸಾಧಿಸಿದರೆ ಈ ದರ್ಗಾದಲ್ಲಿ ಚಾದರ್ ಸಮರ್ಪಿಸಿ, ಬಡವರು ಹಾಗೂ ನಿರ್ಗತಿಕರಿಗೆ ಭೋಜನದ ವ್ಯವಸ್ಥೆ ಮಾಡುವುದಾಗಿ ಹರಕೆಯನ್ನು ಹೊತ್ತಿದ್ದೆ. ಅದರಂತೆ, ಇಂದು ನನ್ನ ಬೆಂಬಲಿಗರೊಂದಿಗೆ ಹಾಜರಾಗಿ ಹರಕೆಯನ್ನು ತೀರಿಸುತ್ತಿದ್ದೇನೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.
ಚುನಾವಣೆಗಳಲ್ಲಿ ಶಾಸಕರ ಮತ ಸೆಳೆಯಲು 50 ಲಕ್ಷ ರೂ., 1 ಕೋಟಿ ರೂ.ಗಳ ಆಮಿಷವೊಡ್ಡಲಾಗಿತ್ತು ಎಂಬ ಮಾತುಗಳನ್ನು ಕೇಳಿದ್ದೇವೆ. ಆದರೆ, ಅಹ್ಮದ್‌ಪಟೇಲ್ ರನ್ನು ಸೋಲಿಸಲು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ತಲಾ 15 ಕೋಟಿ ರೂ.ಗಳ ಆಮಿಷವೊಡ್ಡಿತ್ತು ಎಂಬುದನ್ನು ಕೇಳಿ ಆಶ್ಚರ್ಯವಾಗುತ್ತಿದೆ. ಅಲ್ಲದೆ, ಈ ಪ್ರಯತ್ನದಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ ಎಂದು ಅವರು ಹೇಳಿದರು.
ಅಡ್ಡಮತದಾನ ಮಾಡಿದ ಶಾಸಕರ ವರ್ತನೆಯೆ ಅಹ್ಮದ್‌ಪಟೇಲ್ ಗೆಲುವಿಗೆ ಕಾರಣವಾಯಿತು. ಇದು ಸತ್ಯದ ಗೆಲುವು. ಅಹ್ಮದ್‌ಪಟೇಲ್ ಗೆಲುವಿಗಾಗಿ ಅಜ್ಮೀರ್, ದಿಲ್ಲಿಯ ನಿಝಾಮುದ್ದೀನ್ ದರ್ಗಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲೂ ಹಲವರು ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ ಎಂದು ಝಮೀರ್‌ಅಹ್ಮದ್ ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದು ಸಾಧ್ಯವಾಗದ ಮಾತು. ಇದು ಉತ್ತರಪ್ರದೇಶವಲ್ಲ, ಕರ್ನಾಟಕ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಯಾರನ್ನು ಆಯ್ಕೆ ಮಾಡಬೇಕೆಂದು ತೀರ್ಮಾನಿಸಲು ಇಲ್ಲಿನ ಮತದಾರರು ಪ್ರಬುದ್ಧರಿದ್ದಾರೆ ಎಂದು ಅವರು ಹೇಳಿದರು.
ನಟ, ನಿರ್ದೇಶಕ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಹೊಸ ಸೂತ್ರವನ್ನು ಮುಂದಿಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅಂತಹ ಸೂತ್ರಗಳು ಯಶಸ್ವಿಯಾಗುವುದಿಲ್ಲ. ಹೇಳುವುದಕ್ಕೂ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೂ ಬಹಳ ವ್ಯತ್ಯಾಸವಿದೆ. ಜನರೇ ಅದನ್ನು ಒಪ್ಪುವುದಿಲ್ಲ ಎಂದರು. ಆಮ್ ಆದ್ಮಿ ಪಕ್ಷ ರಚನೆಯಾದಾಗ ಜನರು ಏನೋ ಬದಲಾವಣೆಯಾಗಲಿದೆ, ಭ್ರಷ್ಟಾಚಾರ ನಿರ್ಮೂಲನೆಯಾಗಲಿದೆ ಎಂಬ ಆಶಾಭಾವನೆ ಹೊಂದಿದ್ದರು. ದಿಲ್ಲಿಯಲ್ಲಿ ಅವರ ಕೈಗೆ ಜನ ಅಧಿಕಾರದ ಚುಕ್ಕಾಣಿ ನೀಡಿದರು. ಆದರೆ, ಕ್ರಮೇಣ ಅವರಲ್ಲೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಝಮೀರ್‌ಅಹ್ಮದ್ ಹೇಳಿದರು. ನಟ, ನಟಿಯರನ್ನು ನೋಡಿ ಜನ ಮತ ಹಾಕುವುದಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಿರಿಯ ನಟ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಪ್ರಚಾರ ಸಭೆಗಳಲ್ಲಿ ಜನಸಾಗರವೇ ಸೇರುತ್ತಿತ್ತು. ಆದರೆ, ಚುನಾವಣಾ ಫಲಿತಾಂಶದಲ್ಲಿ ಅವರು ಮೂರನೆ ಸ್ಥಾನಕ್ಕೆ ತಳಲ್ಪಟ್ಟಿದ್ದರು ಎಂದು ಝಮೀರ್‌ಅಹ್ಮದ್ ತಿಳಿಸಿದರು.
ಆರೋಗ್ಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ಭಗವಂತ ಒಳ್ಳೆಯದು ಮಾಡಲಿ. ಅವರು ನನ್ನ ಮಾಜಿ ಅಣ್ಣ. ಒಂದೇ ತಟ್ಟೆಯಲ್ಲಿ ನಾವು ಊಟ ಮಾಡಿದ್ದೇವೆ. ಅವರಿಗೆ ಸದಾ ಒಳ್ಳೆಯದನ್ನೆ ಬಯಸುತ್ತೇನೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶಕೀಲ್‌ನವಾಝ್, ಸೈಯದ್ ಮುಜಾಹಿದ್, ಅಯ್ಯೂಬ್‌ಖಾನ್, ಇಕ್ಬಾಲ್, ಅಯಾಝ್‌ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಉಪೇಂದ್ರ ಬಡವರಿಗಾಗಿ ಏನು ಮಾಡಿದ್ದಾರೆ?
ಉಪೇಂದ್ರ ಚಲನಚಿತ್ರರಂಗದಿಂದ ನಿವೃತ್ತರಾಗುತ್ತಿದ್ದಾರೆ. ಅದಕ್ಕಾಗಿ, ರಾಜಕೀಯಕ್ಕೆ ಬರುತ್ತಿದ್ದಾರೆ. ತಮ್ಮ ಸಿನಿಮಾಗಳಿಂದ ಕೋಟ್ಯಂತರ ರೂ.ಗಳನ್ನು ಸಂಪಾದಿಸಿದ್ದಾರೆ. ಆದರೆ, ಬಡವರಿಗಾಗಿ ಒಂದೇ ಒಂದು ಕಾರ್ಯಕ್ರಮ ಮಾಡಿದ್ದಾರೆಯೆ. ಅವರ ನಿರೀಕ್ಷೆಯಂತೆ ಇಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ.
-ಝಮೀರ್‌ಅಹ್ಮದ್ ಖಾನ್, ಜೆಡಿಎಸ್ ಬಂಡಾಯ ಶಾಸಕ